

ಹಾನಗಲ್ಲ: ಬೇಸಿಗೆ ಹಂಗಾಮಿನ ಬೆಳೆ ಬೆಳೆಯಲು ಹಾಗೂ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವುದಕ್ಕಾಗಿ ಧರ್ವ ಜಲಾಶಯದಿಂದ ನಾಲ್ಕು ಹಂತದಲ್ಲಿ ನೀರು ಹರಿಸುವ ಕುರಿತು ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಮಂಗಳವಾರ ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸವಣೂರು ಉಪವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾಹಿತಿ ನೀಡಿದ ನೀರಾವರಿ ಇಲಾಖೆ ಇಂಜಿನಿಯರ್ ಎಲ್.ಜಿ. ರಾಕೇಶ, ಜಲಾಶಯದಲ್ಲಿ ಸದ್ಯ 29 ಅಡಿ ನೀರು ಸಂಗ್ರಹವಿದೆ. 96 ಕೆರೆಗಳಿಗೆ ನೀರು ತುಂಬಿಸಲು ಮತ್ತು ರೈತರು ಬೇಸಿಗೆಯಲ್ಲಿ ಬೆಳೆಯುವ ಬೆಳೆಗಳನ್ನು ನಿರ್ಧರಿಸಿ, ಯಾವ ಸಮಯಕ್ಕೆ ನೀರು ಬಿಡಬೇಕೆಂಬುದನ್ನು ಸಲಹೆ ನೀಡಬೇಕು. ಇದರಲ್ಲಿ 15 ಅಡಿಗಳಷ್ಟು ನೀರನ್ನು ಹಾನಗಲ್ಲ ಪಟ್ಟಣದ ಜನತೆಗೆ ಕುಡಿಯುವ ನೀರಿಗಾಗಿ ಮೀಸಲಿಡಬೇಕಿದೆ. ಇನ್ನುಳಿದ 6200 ಕ್ಯೂಸೆಕ್ ನೀರನ್ನು ಹಂತ-ಹಂತವಾಗಿ ಬಿಡುಗಡೆಗೊಳಿಸಬಹುದಾಗಿದೆ ಎಂದು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಬೇಸಿಗೆ ಬೆಳೆಗಳಿಗಾಗಿ ನೀರು ಹರಿಸುವ ಮುನ್ನ ಕಾಲುವೆ ದುರಸ್ತಿಗೊಳಿಸಬೇಕು. ಕಾಲುವೆ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪುತ್ತಿಲ್ಲ. ಕಾಲುವೆಯಲ್ಲಿ ಗಿಡ-ಗಂಟೆಗಳು ಬೆಳೆದು ನಿಂತಿವೆ. ಅವೆಲ್ಲವನ್ನೂ ಸ್ವಚ್ಛಗೊಳಿಸಿದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತ ಫಲಾನುಭವಿಗಳಿಗೆ ನೀರು ತಲುಪುತ್ತದೆ. ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ರೈತ ಸಂಘದ ಕಾರ್ಯದರ್ಶಿ ರುದ್ರಪ್ಪ ಹಣ್ಣಿ ಮಾತನಾಡಿ, ನೀರು ಪೋಲಾಗದಂತೆ ಕಾಲುವೆ ದುರಸ್ತಿಗೊಳಿಸಿದರೆ ಮಾತ್ರ ಕೊನೆಯ ಗ್ರಾಮಗಳಾದ ಅರಿಷಣಗುಪ್ಪಿ, ಕಂಚಿನೆಗಳೂರು, ಬಾಳಂಬೀಡ ಗ್ರಾಮಗಳವರೆಗೆ ನೀರು ತಲುಪುತ್ತದೆ ಎಂದರು.
ಎಸಿ ಮೊಹಮ್ಮದ ಖಿಜರ್ ಮಾತನಾಡಿ, ಅಚ್ಚುಕಟ್ಟು ಪ್ರದೇಶದ ಎಲ್ಲ ಜಮೀನುಗಳಿಗೆ ನೀರು ಹರಿಸಲು ಎಲ್ಲ ವ್ಯವಸ್ಥೆ ಕೈಗೊಳ್ಳಲಾಗುವುದು, ಮೊದಲ ಹಂತದಲ್ಲಿ ಸಂಕ್ರಾಂತಿ ಹಬ್ಬಕ್ಕಾಗಿ ಜ. 8ರಿಂದ 500 ಕ್ಯೂಸೆಕ್ ನೀರು ಹರಿಸಲಾಗುವುದು. 2ನೇ ಹಂತದಲ್ಲಿ ಫೆ. 1ರಿಂದ 25 ರವರೆಗೆ, 3ನೇ ಹಂತದಲ್ಲಿ ಮಾರ್ಚ್ 20ರಿಂದ ಉಳಿದಿರುವ ನೀರನ್ನು ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಬಿಡುಗಡೆಗೊಳಿಸಲಾಗುವುದು ಎಂದರು.
ಗ್ರೇಡ್-2 ತಹಸೀಲ್ದಾರ್ ರವಿ ಕೊರವರ, ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ, ಉಪಾಧ್ಯಕ್ಷೆ ವೀಣಾ ಗುಡಿ, ಮುಖ್ಯಾಧಿಕಾರಿ ವೈ.ಕೆ. ಜಗದೀಶ, ಎಡಿಎ ಮಾರುತಿ ಅಂಗರಗಟ್ಟಿ, ನೀರಾವರಿ ಇಂಜಿನಿಯರ್ ರಾಘವೇಂದ್ರ, ಅನ್ನಪೂರ್ಣ ಮಣಕವಾಡ, ರೈತರಾದ ಕೊಟ್ರೇಶ ಅಂಗಡಿ, ಬಿ.ಸಿ. ಪಾಟೀಲ, ವೀರೇಶ ಬೈಲವಾಳ, ಭರಮಣ್ಣ ಶಿವೂರ, ಬಸವಂತ ಮೆಳ್ಳಳ್ಳಿ, ಚಂದ್ರಣ್ಣ ಗೂಳಿ, ರಾಮನಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ಶಿವಲಿಂಗಪ್ಪ ಈಶಪ್ಪನವರ, ಪರಶುರಾಮ ಕುಂಟನಹೊಸಳ್ಳಿ ಇತರರು ಉಪಸ್ಥಿತರಿದ್ದರು.
ಜಿಪಂ ಮಾಜಿ ಸದಸ್ಯ ಟಾಕನಗೌಡ ಪಾಟೀಲ ಮಾತನಾಡಿ, ಶೃಂಗೇರಿ, ಹೀರೂರು, ಗೆಜ್ಜಿಹಳ್ಳಿ, ಡೊಳ್ಳೇಶ್ವರ ಗ್ರಾಮಗಳ ವ್ಯಾಪ್ತಿಯಲ್ಲಿ ರೈತರು ಭತ್ತದ ನಾಟಿ ಮಾಡಲು ಸಸಿ ಮಡಿಗಳ ಸಿದ್ಧತೆ ಕೈಗೊಂಡಿದ್ದಾರೆ. ಈ ಭಾಗದಲ್ಲಿ ಭತ್ತ ಹೊರತುಪಡಿಸಿ ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಭತ್ತಕ್ಕೆ ನಿರಂತರ ನೀರಿನ ಅಗತ್ಯತೆಯಿದ್ದು, ಬೇರೆ ಬೆಳೆಗಳನ್ನು ಬೆಳೆಯುವ ಮುಂದಿನ ಗ್ರಾಮಗಳ ರೈತರು ಸಹಕರಿಸಬೇಕಿದೆ ಎಂದರು.
ಸದ್ಯ ಕೆರೆ-ಕಟ್ಟೆಗಳಲ್ಲಿ ನೀರಿನ ಸಂಗ್ರಹವಿದೆ. ಸುರಳೇಶ್ವರ ಗ್ರಾಮದವರೆಗೆ ಬೆಳೆಗಳಿಗೆ ಹರಿಸಬಹುದಾದ ನೀರನ್ನು ಹೊರತುಪಡಿಸಿ, ಮಾರ್ಚ್ ತಿಂಗಳಲ್ಲಿ ಒಂದೇ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸಿದರೆ ಕೆರೆಗಳು ತುಂಬುವುದಲ್ಲದೇ, ಕಾಲುವೆಯ ಕೊನೆಯ ಹಳ್ಳಿಗಳಿಗೂ ನೀರು ತಲುಪುತ್ತದೆ. | ರಾಜಣ್ಣ ಗೌಳಿ, ರೈತ ಮುಖಂಡ