ಉತ್ತಮ ಫಲಕ್ಕೆ ಧರ್ಮ ಆಚರಣೆ ಅಗತ್ಯ

SIRSI SHREE
Published on

ಶಿರಸಿ: ಧರ್ಮವು ಸದಾ ಅಹಿಂಸೆ, ಸಂಯಮ ಮತ್ತು ತಪಸ್ಸನ್ನು ಆಚರಿಸಲು ಹೇಳುತ್ತದೆ. ಯಾರು ದೈನಂದಿನ ಜೀವನದಲ್ಲಿ ಧರ್ಮವನ್ನು ಆಚರಿಸುತ್ತಾರೋ ಅವರು ಉತ್ತಮ ಫಲ ಪಡೆಯುತ್ತಾರೆ ಎಂದು ಸ್ವಾದಿ ಶ್ರೀ ದಿಗಂಬರ ಜೈನ ಮಠದ ಪೀಠಾಧೀಶರಾದ ಶ್ರೀ ಭಟ್ಟಾಕಳಂಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹೇಳಿದರು.

ವಿಜಯದಶಮಿ ಅಂಗವಾಗಿ ಸ್ವಾದಿ ಶ್ರೀ ದಿಗಂಬರ ಜೈನ ಮಠದಲ್ಲಿ ಗುರುವಾರ ಕೂಷ್ಮಾಂಡಿನಿ ದೇವಿಗೆ ವಿಶೇಷ ಪೂಜೆ ನಡೆಸಿ, 24 ತೀರ್ಥಂಕರರಿಗೆ ಅಭಿಷೇಕ, ಪೂಜೆ, ಧಾರ್ವಿುಕ ವಿಧಿವಿಧಾನಗಳನ್ನು ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ಬೇಕು ಎನ್ನುವುದೇ ಪ್ರಪಂಚದಲ್ಲಿ ಹೆಚ್ಚು. ಆದರೆ, ಬೇಡ ಸಾಕು ಎನ್ನುವುದೇ ಸಂಯಮ. ಸಂಯಮದಿಂದಲೇ ಸಮೃದ್ಧಿಯ, ಪರಿಪೂರ್ಣತೆಯ, ಸಂತೃಪ್ತಿಯ ಬದುಕಾಗುತ್ತದೆ. ಈ ಲೋಕದಲ್ಲಿ ಸುಖ ದುಃಖ ಇದೆ. ಇದು ಮುಂದಿನ ಜೀವನದಲ್ಲಿ ಗತಿ, ಸದ್ಗತಿ ಬೇಕೆಂದು ಬಯಸುತ್ತದೆ. ಧರ್ಮ ಒಂದೇ ಉದ್ಧಾರ ಮಾಡಲು ಸಾಧ್ಯ. ಧರ್ಮ ಆಚರಣೆ ಮಾಡಿದವರು ಸುಖ, ನೆಮ್ಮದಿಯಿಂದ ಬದುಕಲು ಸಾಧ್ಯ. ಧರ್ಮ ಕಷ್ಟದಲ್ಲಿದ್ದವರನ್ನು ಎತ್ತಿ, ಅತಿ ಸುಖವನ್ನು ನೀಡುತ್ತದೆ. ಅದು ಯಾವ ಧರ್ಮ ಎಂದರೆ ಅತ್ಯುತ್ತಮ ಮಂಗಳ ಅಂಹಿಸಾ ಧರ್ಮ. ಮನ, ವಚನ, ಕಾರ್ಯ ಶುದ್ಧಿಯಿಂದ ಧರ್ಮ ಆಚರಿಸಿದರೆ ಸುಖ ಅನುಭವಿಸುತ್ತಾರೆ ಎಂದರು.  ಶ್ರೀಮಠದ ಲಾಂಛನ, ಪತಾಕೆ, ಛತ್ರ, ಚಾಮರಗಳ ಜತೆ ನಡೆದ ಧರ್ಮಗ್ರಂಥಗಳು ಹಾಗೂ ಹಿರಿಯ ತೀರ್ಥಂಕರರ ಮೂರ್ತಿಗಳ ವಿಜಯದಶಮಿ ಮೆರವಣಿಗೆಗೆ ಶ್ರೀಗಳು ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net