ಮೋಕ್ಷ ಸಾಧನೆಗೆ ಧರ್ಮವೇ ದಾರಿ: ಸುತ್ತೂರು ಶ್ರೀ ಆಶೀರ್ವಚನ

21 HHR P 10 (2)
ಕಲ್ಲಿಹಾಳ್‌ನಲ್ಲಿ 50ನೇ ವರ್ಷದ ಜಂಗಮ ಆರಾಧನೆ, ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯನ್ನು ಬಿಳಕಿ ಮಠದ ರಾಚೋಟೇಶ್ವರ ಶ್ರೀಗಳು ಉದ್ಘಾಟಿಸಿದರು. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಎಚ್.ಆರ್.ಬಸವರಾಜಪ್ಪ, ಎಚ್.ಎಲ್.ಷಡಕ್ಷರಿ, ಶಿವಾನಂದಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಜೀವನವನ್ನು ಪವಿತ್ರವಾಗಿಸಿಕೊಳ್ಳುವುದು ಮನುಷ್ಯನ ಕೈಯಲ್ಲೇ ಇದೆ ಎಂದು ಮೈಸೂರಿನ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಸಮೀಪದ ಕಲ್ಲಿಹಾಳ್‌ನಲ್ಲಿ 50ನೇ ವರ್ಷದ ಜಂಗಮ ಆರಾಧನೆ ಪ್ರಯುಕ್ತ ಸೋಮವಾರ ಹಮ್ಮಿಕೊಂಡಿದ್ದ ಇಷ್ಟಲಿಂಗ ಮಹಾಪೂಜೆ ಹಾಗೂ ಧರ್ಮಸಭೆಯ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಸಂಘ ಜೀವನ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಮನುಷ್ಯ ಬದಲಾಗಲು ಬಹಳ ದಿನ ಬೇಕಾಗಿಲ್ಲ. ಪ್ರತಿಯೊಬ್ಬರೂ ದಾರ್ಶನಿಕರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನಲ್ಲಿ ಆಚಾರ-ವಿಚಾರಗಳು ಮಹತ್ವ ಪಡೆಯುತ್ತವೆ. ಕೆಲವೊಂದು ಘಟನೆಗಳು ಜೀವನದ ದಿಕ್ಕನ್ನೇ ಬದಲಾಯಿಸುತ್ತವೆ ಎಂದರು.
ಭೂಮಿಯಲ್ಲಿ ಸಾವು-ನೋವುಗಳು ಅನಿರೀಕ್ಷಿತ. ಬದುಕಿನಲ್ಲಿನ ವ್ಯಕ್ತಿಗತ ಬದಲಾವಣೆಯಾದರೆ ಪವಿತ್ರ ಜೀವನ ನಮ್ಮದಾಗುತ್ತದೆ. ಧರ್ಮಾಚರಣೆಯನ್ನು ಕೈಬಿಡಬಾರದದು. ಧರ್ಮ ನಂಬಿ ನಡೆದರೆ ಮುಕ್ತಿ ಸಾಧ್ಯ. ವ್ಯಕ್ತಿ ಸಮಾಜ ಜೀವಿಯಾಗಿ ಬದುಕಬೇಕು. ಧರ್ಮ ಮಾರ್ಗದಲ್ಲಿ ನಡೆದವರನ್ನು ಧರ್ಮ ರಕ್ಷಣೆ ಮಾಡುತ್ತದೆ ಎನ್ನುವುದು ಸತ್ಯವಾದ ಮಾತು. ಮನುಷ್ಯನ ಬದುಕು ವಿಶಾಲವಾದುದು. ಜಗತ್ತು ಊಹೆಗೂ ನಿಲುಕದಂತೆ ಮುನ್ನುಗ್ಗುತ್ತಿದೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ದೂರ ಮಾಡಬೇಕಿರುವುದು ಪಾಲಕರ ಕರ್ತವ್ಯ ಎಂದು ಹೇಳಿದರು.
ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟೋಪಚಾರ ಮಾಡುವ ಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಆಧುನಿಕತೆ ಭರಾಟೆ ಮನುಷ್ಯನ ಅವನತಿಗೆ ಕಾರಣವಾಗಬಾರದು. ತಾಂತ್ರಿಕತೆಗಳಿಂದ ಬದುಕು ಬಂಗಾರವಾಗಬೇಕು. ಪ್ರತಿಯೊಬ್ಬನ ಅಂತರಗಂದಲ್ಲೂ ಭಗವಂತ ಸ್ಥಾನ ಪಡೆದಿದ್ದಾನೆ. ಎಲ್ಲರಿಗೂ ಒಳಿತು ಭಾವಿಸುವುದನ್ನು ಮೈಗೂಡಿಸಿಕೊಳ್ಳಬೇಕು. ಭಗವಂತನಲ್ಲಿ ನಂಬಿಕೆ ಬೇಕು. ಭಕ್ತಿಯಲ್ಲಿ ಸಂಶಯಕ್ಕೆ ಆಸ್ಪದ ನೀಡಬಾರದು. ಧರ್ಮಮಾರ್ಗ ಮೋಕ್ಷ ಸಾಧನೆಗೆ ದಾರಿ ಎಂದರು.
ಆಶೀರ್ವಚನ ನೀಡಿದ ಬಿಳಕಿ ಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ, ಅಂತರಂಗದ ಪರಿಶುದ್ಧಿಗೆ ಇಷ್ಟಲಿಂಗ ಧರಿಸಬೇಕು. ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕಿದೆ. ಶ್ರಾವಣ ಮಾಸದ ಪೂಜಾ ಕೈಂಕರ್ಯಗಳು ಹೆಚ್ಚು ಫಲಪ್ರದವಾಗಿರುತ್ತವೆ. ಪವಿತ್ರ ಮಾಸದಲ್ಲಿ ಒಳ್ಳೆಯ ವಿಚಾರಗಳನ್ನು ಕೇಳಿ ವರ್ಷದುದ್ದಕ್ಕೂ ರೂಢಿಗೆ ತರಬೇಕು ಎಂದು ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ, ಶಾಸಕಿ ಶಾರದಾ ಪೂರ‌್ಯಾನಾಯ್ಕಾ, ಎಂಎಲ್‌ಸಿ ಎಸ್.ರುದ್ರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಚ್.ಎಲ್.ಷಡಕ್ಷರಿ, ಡಾ. ಧನಂಜಯ್ ಸರ್ಜಿ, ಪ್ರಮುಖರಾದ ನಿಂಗಪ್ಪ ಹೊಳಲೂರು, ಶಿವಾನಂದಪ್ಪ, ಜಯಣ್ಣ, ಪ್ರಶಾಂತ್, ಚೇತನ್ ಇತರರಿದ್ದರು.

ತೀರ್ಥಕ್ಷೇತ್ರ ಸುತ್ತಿದಷ್ಟೂ ಫಲ ಪ್ರಾಪ್ತಿ
ಆಧುನಿಕತೆ ಭರಾಟೆಗೆ ಸಿಲುಕಿ ಬದುಕು ಮೂರಾಬಟ್ಟೆಯಾಗುತ್ತಿದೆ. ಮಕ್ಕಳಲ್ಲಿ ಗುರು-ಹಿರಿಯರಿಗೆ ಗೌರವ ನೀಡುವುದನ್ನು ರೂಢಿಸಬೇಕು. ಯುವ ಜನತೆ ಹಾದಿ ತಪ್ಪುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸುವುದು ಪಾಲಕರ ಕೈಯಲ್ಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ತಿಳಿಸಿದರು. ಪ್ರತಿಯೊಬ್ಬರೂ ಧರ್ಮ ಮಾರ್ಗದಲ್ಲಿ ನಡೆದು ಸಮಾಜದಲ್ಲಿನ ಅನ್ಯಧರ್ಮೀಯರೊಡನೆ ಹೊಂದಾಣಿಕೆ ಮಾಡಿಕೊಂಡು ಬದುಕು ಸಾಗಿಸಬೇಕು. ವೃದ್ಧಾಪ್ಯದಲ್ಲಿ ತಂದೆ-ತಾಯಿಗಳು ವೃದ್ಧಾಶ್ರಮಗಳ ಪಾಲಾಗುವುದು ತಪ್ಪಬೇಕು. ಹಿರಿಯರನ್ನು ಗೌರವಿಸಿದರೆ ತೀರ್ಥಕ್ಷೇತ್ರ ಸುತ್ತಿದಷ್ಟೇ ಫಲ ಪ್ರಾಪ್ತಿಯಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net