ಯುವಕರಿಗೆ ಧರ್ಮಮಾರ್ಗವೇ ಶ್ರೇಷ್ಠ

17 LXR 4
Published on

ಲಕ್ಷ್ಮೇಶ್ವರ: ಸಮೀಪದ ಸವಣೂರು ತಾಲೂಕು ಹೂವಿನಶಿಗ್ಲಿ ಗ್ರಾಮದ ಹಿಂದು ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮದ ಅಂಗವಾಗಿ ವಿರಕ್ತಮಠದ ಶ್ರೀಚನ್ನವೀರ ಮಹಾಸ್ವಾಮೀಜಿಗಳವರ ನಾಣ್ಯಗಳಿಂದ ತುಲಾಭಾರ ಕಾರ್ಯಕ್ರಮವನ್ನು ಭಕ್ತರು ನೆರವೇರಿಸಿದರು.
ನೇತೃತ್ವ ವಹಿಸಿದ್ದ ಜಲ್ಲಾಪುರದ ಡಾ. ಗುರು ಮಹಾಂತಯ್ಯ ಶಾಸ್ತ್ರೀಗಳು ಮಾತನಾಡಿ, ಮಠಮಾನ್ಯಗಳಿಗೆ ಗೌರವ ನೀಡುವ ಸಂಪ್ರದಾಯ ನಮ್ಮಲ್ಲಿದೆ. ಯುವಕರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಯುವಕರು ಮನಸು ಮಾಡಿದರೆ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದಂತಾಗುತ್ತದೆ, ಗಣೇಶೋತ್ಸವದಲ್ಲಿ ಶ್ರೀಗಳ ತುಲಾಭಾರ ನಿಜಕ್ಕೂ ಶ್ಲಾಘನೀಯ. ಡಿಜೆ ಯುಗದಲ್ಲಿ ಯುವಕರು ಇಂತಹ ಒಳ್ಳೆಯ ಕಾರ್ಯ ಮಾಡಿದ್ದಾರೆ ಎಂದು ನುಡಿದರು.
ಗದಗ ಬೂದಿಹಾಳದ ಗವಿಸಿದ್ಧೇಶ್ವರ ಶಾಸ್ತ್ರಿ ಮಾತನಾಡಿ, ಹೆಣ್ಣು ಹೊನ್ನು ಮಣ್ಣುಗಳಿಗೆ ಬೆಲೆ ಕೊಡದೆ ಗುರುಗಳಿಗೆ ಗೌರವ ಕೊಡಬೇಕು. ಗುರು ಮುಖೇನ ಮಾಡಿದ ಕಾರ್ಯಗಳು ಸಫಲವಾಗುತ್ತದೆ ಎಂದು ಹೇಳಿದರು.
ತುಲಾಭಾರದ ತಕ್ಕಡಿಯಲ್ಲಿ ಕುಳಿತು ಆಶೀರ್ವಚನ ನೀಡಿದ ಚನ್ನವೀರ ಶ್ರೀಗಳು ಹಿಂದು ಮಹಾಸಭಾ ಗಣಪತಿಯ ಯುವಕರು ನಮ್ಮ ಗುರುಕುಲ ಶಿಕ್ಷಣ ಸಂಸ್ಥೆಯ ಅನಾಥ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ತುಲಾಭಾರ ನಡೆಸಿದ್ದು ನಮಗೆ ತುಂಬ ಸಂತೋಷ ನೀಡಿದೆ. ಅಧ್ಯಾತ್ಮದ ಹಾದಿ ತುಳಿದ ಜೀವನ ಪಾವನ ಎಂದು ನುಡಿದರು. ಸಿದ್ದಯ್ಯ ಹಿರೇಮಠ, ಬಾಲಾಜಿ ಕಟ್ಟಿಸಂಗಾವಿ ಅವರಿಂದ ಸಂಗೀತ ಸೇವೆ ನಡೆಯಿತು. ಮಹಾದೇವ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net