

ಸಿದ್ದಾಪುರ: ಸಂಪತ್ತಿಗೆ ವಿಪತ್ತು ಇರುತ್ತದೆ. ಬೇರೆ ಆಕರ್ಷಣೆ ಹಿಂದೆ ಓಡದೇ ಧರ್ಮಾನುಷ್ಠಾನದ ಜತೆಗೆ ಸಾಗಬೇಕು. ಧರ್ಮ, ದೇವ ಕೃಪೆಯೊಂದೇ ಶಾಶ್ವತ ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದಲ್ಲಿ 372ದಿನ ನಡೆದ ಗಾಯತ್ರೀ ಮಹಾ ಸತ್ರ ಸಂಪನ್ನ ಸಮಾರಂಭದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ರಾಜಮಾನ್ಯ, ಸಿಂಧೂರ ಶ್ರೀ, ಗಾನಶ್ರೀ, ಗಾಯತ್ರೀ ಪುರಸ್ಕಾರ ಪ್ರದಾನ ಮಾಡಿ ಆಶೀರ್ವಚನ ನೀಡಿದರು. ಬುದ್ದಿ ಸರಿಯಾದ ದಾರಿಯಲ್ಲಿ ಇರಬೇಕು. ಶರೀರಕ್ಕೆ ಶಿರಸ್ಸಿನಷ್ಟೇ ಬದುಕಿಗೆ ಗಾಯತ್ರೀ ದೇವಿ ಉಪಾಸನೆ ಮುಖ್ಯ. ಅನರ್ಥ ಮಾಡುವ ಮನಸ್ಸುಗಳಿಗೆ ಅದು ಬಾರದೇ ಇರುವಂತೆ ಇದು ಪ್ರೇರಕ. ಗಾಯತ್ರೀ ಮಹಾ ಮಂತ್ರ ಸರಿಯಾಗಿ ಬಂದರೆ, ಅನುಷ್ಠಾನ ಮಾಡಿದರೆ ಪಾಪ ಇಲ್ಲ. ಜನ ಸಂಪತ್ತಿನ ಹಿಂದೆ ಇದ್ದಾರೆ. ಆದರೆ, ಬುದ್ದಿಯ ಹಿಂದೆ, ಗಾಯತ್ರೀ ಆರಾಧನೆ ಹಿಂದೆ ಇರಬೇಕು ಎಂದರು.
ರಾಜಮಾನ್ಯ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ, ಕಲಗದ್ದೆಯಲ್ಲಿ ಒಳ್ಳೆಯ ಕಾರ್ಯವನ್ನು ಸಮಾಜದ ಪರವಾಗಿ ಮಾಡಲಾಗುತ್ತಿದೆ. ಸಾನ್ನಿಧ್ಯ ನೀಡಿದ ಗುರುಗಳು ಕೇವಲ ಒಂದು ಸಮಾಜಕ್ಕೆ ಆಶೀರ್ವಾದ ಕೊಡದೇ ಎಲ್ಲರಿಗೂ ಆಶೀರ್ವಾದ ಬಯಸುತ್ತಾರೆ. ಅಂಥ ಗುರುಗಳು ನಮ್ಮ ಹೆಮ್ಮೆ, ನಮ್ಮ ಭಾಗ್ಯ. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಸಿಗಬೇಕು ಎಂದರು.
ಸಿಂಧೂರ ಶ್ರೀ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಜ್ಯೋತಿಷಿ ಡಾ. ಗೋಪಾಲಕೃಷ್ಣ ಶರ್ಮಾ, ಗಾನಶ್ರೀ ಪ್ರಶಸ್ತಿ ಸ್ವೀಕರಿಸಿದ ಭಾಗವತ ಕೇಶವ ಹೆಗಡೆ ಕೊಳಗಿ, ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಮಾತನಾಡಿದರು.
ಹವ್ಯಕ ಮಹಾ ಮಂಡಳದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಸಮಿತಿ ಕಾರ್ಯಾಧ್ಯಕ್ಷ ಡಾ. ಜಿ.ಎಲ್. ಹೆಗಡೆ ಕುಮಟಾ, ಶಾಸಕ ಭೀಮಣ್ಣ ನಾಯ್ಕ, ಗೌರವಾಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಇತರರಿದ್ದರು.