

ಹಾನಗಲ್ಲ: ತಾಲೂಕಿನ 18 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರಾವರಿಗೆ ಆಸರೆಯಾದ ರೈತರ ಜೀವಸೆಲೆ ಧರ್ಮಾ ಜಲಾಶಯ 29-10 ಅಡಿಗಳ ಗರಿಷ್ಠ ಮಟ್ಟವನ್ನು ತುಂಬಿ ಕೋಡಿ ಬಿದ್ದುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ.
ಪ್ರಸಕ್ತ ಮುಂಗಾರು ಆರಂಭದಲ್ಲಿ ಜೂನ್ ಕಳೆದು ಜುಲೈ 2ನೇ ವಾರದಲ್ಲೂ ಮುಂಗಾರು ಮಳೆ ಬಾರದ್ದರಿಂದ ಧರ್ಮಾ ಜಲಾಶಯ ಖಾಲಿಯಾಗಿಯೇ ಉಳಿದಿತ್ತು. ಇದರಿಂದ ರೈತರಲ್ಲಿ ತೀವ್ರ ಆತಂಕ ಮನೆ ಮಾಡಿತ್ತು. ಈ ವರ್ಷ ಭತ್ತ ಬೆಳೆಯುವುದೋೀ, ಬಿಡುವುದೋ ಎಂಬ ಗೊಂದಲ ಉಂಟಾಗಿತ್ತು. 8 ಟಿಎಂಸಿ ಸಾಮರ್ಥ್ಯ ಹೊಂದಿರುವ ಧರ್ಮಾ ಜಲಾಶಯ ತುಂಬಿದರೆ ಹಾನಗಲ್ಲ ತಾಲೂಕಿನಲ್ಲಿ ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ನಾಟಿ ಕೈಗೊಳ್ಳಲಾಗುತ್ತದೆ. ಇದರೊಂದಿಗೆ ಬೇಸಿಗೆ ಹಂಗಾಮಿನಲ್ಲೂ ಭತ್ತ, ಗೋವಿನಜೋಳ ಸೇರಿದಂತೆ ಮತ್ತಿತರ ಬೆಳೆಗಳಿಗೆ ಧರ್ಮಾ ಕಾಲುವೆ ಮೂಲಕ ಬೆಳೆ ಬೆಳೆಯಲು ನೀರು ಹರಿಸಲಾಗುತ್ತದೆ. ಹೀಗಾಗಿ ಜಲಾಶಯದ ಅಚ್ಚುಕಟ್ಟು ಪ್ರದೇಶದ ರೈತರು ನೀರು ಹರಿದು ಬರುವುದನ್ನೇ ಎದುರು ನೋಡುತ್ತಿದ್ದರು.
ಜುಲೈ 15ರ ನಂತರ ಆರಂಭವಾದ ಮಳೆಯಿಂದ ಕೇವಲ 10-12 ದಿನಗಳಲ್ಲಿ ಜಲಾಶಯಕ್ಕೆ 29 ಅಡಿ ನೀರು ಹರಿದು ಬಂದಿದ್ದು, ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಇದೀಗ ಪ್ರತಿದಿನ 1 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಗೆ ಹರಿಬಿಡಲಾಗುತ್ತಿದೆ. ಇದಲ್ಲದೇ ವರ್ಷದ 12 ತಿಂಗಳೂ ಹಾನಗಲ್ಲ, ಮುಂಡಗೋಡ ಪಟ್ಟಣ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಈ ವರ್ಷ ಮಳೆ ವಿಳಂಬವಾಗಿದ್ದರೂ ರೈತರಿಗೆ ಸಮಾಧಾನ ತಂದಿದೆ.
ಗೋವಿನಜೋಳ ಬದಲು ಭತ್ತ ನಾಟಿ: ಧರ್ಮಾ ಕಾಲುವೆ ಅಚ್ಚುಕಟ್ಟು ಪ್ರದೇಶಕ್ಕೆ ಕಾಲುವೆ ಮೂಲಕ ನೀರು ಹರಿದು ಬರುತ್ತದೆ. ಆದರೆ, ಜುಲೈ ಕೊನೆಯಲ್ಲಿ ಸತತ ಮಳೆಯಿಂದಾಗಿ ಗೋವಿನಜೋಳ ಬಿತ್ತನೆ ಮಾಡಿದ್ದ ರೈತರ ಹೊಲಗಳಲ್ಲಿ ನೀರು ನಿಂತು ಪೈರು ನೆಲ ಬಿಟ್ಟು ಮೇಲೆದ್ದಿಲ್ಲ. ಹೀಗಾಗಿ ಕಾಲುವೆಗೆ ಹೊಂದಿಕೊಂಡಿರುವ ಹೊಲಗಳ ರೈತರೂ ಈಗ ಗೋವಿನಜೋಳ ತೆಗೆದು ಭತ್ತ ನಾಟಿ ಮಾಡುವ ಸಿದ್ಧತೆ ಕೈಗೊಂಡಿದ್ದಾರೆ. ಇತ್ತೀಚೆಗೆ ಭತ್ತದ ಬೆಲೆಯೂ ಹೆಚ್ಚಾಗಿರುವುದರಿಂದ ಮುಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಬೇಕೆಂಬ ಉತ್ಸುಕತೆಯಲ್ಲಿದ್ದಾರೆ. ಎಲ್ಲ ಹೊಲಗಳಲ್ಲಿ ಭತ್ತದ ನಾಟಿಗೆ ಸಸಿಗಳ ಮಡಿ ಮಾಡಿಕೊಂಡಿರುವುದು ಕಂಡುಬರುತ್ತಿದೆ. ಇದಲ್ಲದೆ, ಧರ್ಮಾ ಕಾಲುವೆಯಡಿ ನೂರಾರು ಎಕರೆ ಪ್ರದೇಶದಲ್ಲಿ ಅಡಕೆ, ಬಾಳೆಯನ್ನು ಬೆಳೆಯಲಾಗುತ್ತಿದೆ. ರೈತರು ಇವೆಲ್ಲಕ್ಕೂ ಮಳೆಗಾಲ ಹಾಗೂ ಬೇಸಿಗೆಯಲ್ಲಿ ಇದರ ನೀರನ್ನೇ ಆಶ್ರಯಿಸಿದ್ದಾರೆ.
ಜಲಾಶಯದಲ್ಲಿ ಹೂಳಿನ ಸಾಮ್ರಾಜ್ಯ: ಧರ್ಮಾ ಜಲಾಶಯ ನಿರ್ಮಿಸಿದ ನಂತರದ ದಶಕಗಳಲ್ಲಿ ಇದರಲ್ಲಿನ ಹೂಳು ತೆಗೆಸಿದ ಉದಾಹರಣೆಯಿಲ್ಲ. ಜಲಾಶಯದ ಸುತ್ತಲಿನ ನೂರಾರು ಚ.ಕಿಮಿ ದೂರದಿಂದಲೂ ನೀರು ಹರಿದು ಬಂದು ಸೇರುತ್ತದೆ. ಜಲಾಶಯದ ಸುತ್ತಲೂ ಅರಣ್ಯ ಪ್ರದೇಶವೇ ಹೆಚ್ಚಾಗಿರುವುದರಿಂದ ಅರಣ್ಯದಲ್ಲಿನ ಗಿಡ-ಗಂಟಿಗಳು, ಸೊಪ್ಪು ಟನ್‌ಗಟ್ಟಲೇ ಹರಿದುಬಂದು ಸೇರಿಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಈ ಜಲಾಶಯದ ನೀರಿನ ಸಾಮರ್ಥ್ಯ ಕಡಿಮೆಯಾಗುತ್ತಿರುವುದು ರೈತರಿಗೆರ ಆತಂಕ ಉಂಟುಮಾಡುತ್ತಿದೆ. ಇದರೊಂದಿಗೆ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ನೀರು ಬಳಕೆದಾರರ ಸಂಖ್ಯೆ ಪ್ರತಿ ವರ್ಷವೂ ಹೆಚ್ಚುತ್ತಲಿದೆ. ಆದರೆ, ಇದರ ಹೂಳು ತೆಗೆಸುವತ್ತ ಯಾವುದೇ ಸರ್ಕಾರವೂ ಮನಸು ಮಾಡದಿರುವುದು ಬೇಸರದ ಸಂಗತಿ.
ಕೊಳವೆ ಬಾವಿಗಳಿಗೆ ಮರುಜೀವ: ಜಲಾಶಯದಲ್ಲಿ ನೀರು ತುಂಬಿದ್ದರಿಂದ ಕಾಲುವೆಯ ಮೂಲಕ ಇದರಡಿಯಲ್ಲಿರುವ ತಾಲೂಕಿನ 98 ಕೆರೆಗಳಿಗೆ ನೀರು ತುಂಬಿಕೊಂಡು ಮರುಜೀವ ಪಡೆಯುತ್ತಿವೆ. ಬೇಸಿಗೆ ಅವಧಿಯಲ್ಲಿ ಇಲ್ಲಿನ ಕೊಳವೆ ಬಾವಿಗಳ ನೀರು ಬತ್ತಿ ಹೋಗಿದ್ದರಿಂದ ಕೃಷಿ-ತೋಟಗಾರಿಕೆ ಬೆಳೆಗಳು ಚಿಂತಾಜನಕ ಸ್ಥಿತಿ ತಲುಪಿದ್ದವು. ಸದ್ಯ ಕಾಲುವೆಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಕೊಳವೆ ಬಾವಿಗಳು ಮರುಜೀವ ಪಡೆದಿವೆ.
ಕಳೆದ ವರ್ಷ ಇಷ್ಟೊತ್ತಿಗಾಗಲೇ ಧರ್ಮಾ ಜಲಾಶಯಕ್ಕೆ ರೈತರು-ಸಾರ್ವಜನಿಕರೊಂದಿಗೆ ಬಾಗಿನ ಅರ್ಪಿಸಿದ್ದೆವು. ಈ ಬಾರಿ ಮಳೆ ವಿಳಂಬವಾದ್ದರಿಂದ ಸಮಸ್ಯೆಯಾಗಿತ್ತು. ಇನ್ನು ಕೃಷಿಕರಿಗೆ ಯಾವುದೇ ಆತಂಕವಿಲ್ಲ. ಜಲಾಶಯದ ನೀರನ್ನು ಅಗತ್ಯವಿದ್ದಷ್ಟು ಬಳಕೆ ಮಾಡಿಕೊಂಡು, ರೈತರು ಆರ್ಥಿಕ ಪ್ರಗತಿ ಸಾಧಿಸಬೇಕು ಎಂಬುದು ನಮ್ಮ ಆಶಯ. ಶ್ರೀನಿವಾಸ ಮಾನೆ, ಶಾಸಕ ಪ್ರಸ್ತುತ ಮುಂಗಾರು ಮಳೆ ಒಂದೂವರೆ ತಿಂಗಳು ವಿಳಂಬವಾಗಿದ್ದರಿಂದ ರೈತರಲ್ಲಿ ಆತಂಕ ಎದುರಾಗಿತ್ತು. ಆದರೆ, ಈಗ ಜಲಾಶಯ ತುಂಬಿದ್ದರಿಂದ ರೈತರು ಸಮಾಧಾನಗೊಂಡಿದ್ದಾರೆ. ಭತ್ತದ ಕಣಜವಾಗಿ ಹಾನಗಲ್ಲ ತಾಲೂಕು ಮತ್ತೊಮ್ಮೆ ಕಂಗೊಳಿಸಲಿದೆ. ಉಳಿದೆಲ್ಲ ಬೆಳೆಗಳಿಗಿಂತ ಭತ್ತಕ್ಕೆ ಹೆಚ್ಚು ನೀರು ಒದಗಿಸಲಾಗುತ್ತದೆ.>ಪ್ರಹ್ಲಾದ ಶೆಟ್ಟಿ, ಎಇಇ ಬೃಹತ್ ನೀರಾವರಿ ಇಲಾಖೆ ಹಾನಗಲ್ಲ