ಹುಬ್ಬಳ್ಳಿಯಲ್ಲಿ ಭುಗಿಲೆದ್ದ ರೈತರ ಆಕ್ರೋಶ

Farmers staged a protest at Chennamma Circle, in the heart of Hubballi city.
ಹುಬ್ಬಳ್ಳಿ ನಗರದ ಹೃದಯ ಭಾಗ ಚನ್ನಮ್ಮ ವೃತ್ತದಲ್ಲಿ ರೈತರು ಪ್ರತಿಭಟನೆ ನಡೆಸಿದರು.
Published on: 

ಹುಬ್ಬಳ್ಳಿ: ಸ್ವಾಮಿನಾಥನ್ ಆಯೋಗ ವರದಿ ಜಾರಿ, ಕಬ್ಬಿನ ದರ (ಪ್ರತಿ ಟನ್) ಕನಿಷ್ಠ 5,500 ರೂ.ಗೆ ಹೆಚ್ಚಿಸಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ರೈತರಿಂದ ಅಕ್ರೋಶ ಭುಗಿಲೆದ್ದಿದೆ. 10 ಸಾವಿರಕ್ಕೂ ಅಧಿಕ ರೈತರು ಪ್ರತಿಭಟನೆ ನಡೆಸಿದ್ದಾರೆ

ನಗರದ ಹೃದಯ ಭಾಗ ಚನ್ನಮ್ಮ ವೃತ್ತದಲ್ಲಿ 3 ತಾಸು ಪ್ರತಿಭಟನೆ ನಡೆಸಿದ ರೈತರು ಇಲ್ಲಿಯ ಮಯೂರಿ ಎಸ್ಟೇಟ್​ನಲ್ಲಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಬಾಗಲಕೋಟೆ, ಬೆಳಗಾವಿ, ಗದಗ, ಹಾವೇರಿ, ಇತರೆಡೆಯಿಂದ ಪ್ರತಿಭಟನೆಯಲ್ಲಿ ಭಾಗಿಯಾದ ರೈತರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇದರ ಬಗ್ಗೆ ಗಮನ ಹರಿಸಬೇಕು. ಮಂಗಳವಾರ ಮಧ್ಯಾಹ್ನದೊಳಗೆ ಕೇಂದ್ರ ಸಂಪುಟದಲ್ಲಿ ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ, ಸ್ವಾಮಿನಾಥನ್ ಆಯೋಗ ವರದಿ ಜಾರಿ ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ನೀಡುವ ಕುರಿತು ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು ಇಂದು(ಮಂಗಳವಾರ) ಮಧ್ಯಾಹ್ನ 3 ಗಂಟೆಯೊಳಗೆ ಸ್ಪಷ್ಟ ನಿರ್ಧಾರ ತಿಳಿಸಬೇಕು. ಇಲ್ಲದಿದ್ದರೆ ಇಲ್ಲಿ ನೆರದ ರೈತರು ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಅವರ ನಿವಾಸಕ್ಕೆ ಮುತ್ತಿಗೆ ಹಾಕಿದರೂ ಅಚ್ಚರಿಯಿಲ್ಲ’ ಎಂದು ಹೇಳಿದರು.

ಸಚಿವ ಜೋಶಿ ಅವರು ವಿಡಿಯೊ ಸಂದೇಶದಲ್ಲಿ ರೈತರ ಹಿತಾಸಕ್ತಿ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಕಬ್ಬು ಬೆಳೆಗಾರರಲ್ಲಿ ಉಂಟಾಗಿರುವ ಗೊಂದಲ, ಸಮಸ್ಯೆಗಳನ್ನು ರ್ಚಚಿಸಲು ದೆಹಲಿಗೆ ಆಹ್ವಾನಿಸುತ್ತೇವೆ ಎಂದಿದ್ದಾರೆ. ನಾವೇನು ಅವರ ಪಕ್ಷದ ಕಾರ್ಯಕರ್ತರಲ್ಲ. ದೇಶಕ್ಕೆ ಅನ್ನ ನೀಡುವ ರೈತರಾಗಿದ್ದು, ಅವರೇ ಇಲ್ಲಿಗೇ ಬರಬೇಕು’ ಎಂದು ಆಗ್ರಹಿಸಿದರು.

ರೈತರು ಬಾರಕೋಲು ಚಳವಳಿ ನಡೆಸಿ, ಹಸಿರು ಟವೆಲ್ ಪ್ರದರ್ಶಿಸಿ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಕೇಂದ್ರ ಸಚಿವ ಪ್ಲಲ್ಹಾದ ಜೋಶಿ ಅವರ ನಿವಾಸ ಹಾಗೂ ಕಚೇರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ಹುಬ್ಬಳ್ಳಿಯ ಎಲ್ಲ ಸರ್ಕಲ್ ಗಳನ್ನು ಬಂದ್ ಮಾಡಿ ರೈತರು ಆಕ್ರೋಶ ಹೊರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net