ಸಂಗೀತ ಸರ್ವರಿಗೂ ಆನಂದದ ಸಾಧನ

sangeeta mahotsava
ಹುಬ್ಬಳ್ಳಿಯಲ್ಲಿ ಶನಿವಾರ ಏರ್ಪಡಿಸಿದ್ದ ಪಂ. ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಉದ್ಘಾಟಿಸಿದರು.
Published on: 

ಹುಬ್ಬಳ್ಳಿ: ಸರ್ವರಿಗೂ ಸಂಗೀತವೆಂಬುದು ಆನಂದ ನೀಡುವ ಸಾಧನ. ಪ್ರಸಕ್ತ ದಿನಗಳಲ್ಲಿ ಹಿಂದೂಸ್ತಾನಿ ಸಂಗೀತ ಉಳಿಸಿ, ಬೆಳೆಸುವ ಕಾರ್ಯಗಳು ನಮ್ಮಿಂದಾಗಬೇಕು ಎಂದು ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ ಅಭಿಪ್ರಾಯಪಟ್ಟರು.

ಗಾನ ಗಂಧರ್ವ ಪಂ. ಅರ್ಜುನಸಾ ನಾಕೋಡ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಕ್ಷಮತಾ ಸೇವಾ ಸಂಸ್ಥೆ ಹಾಗೂ ಸ್ವರ್ಣ ಗ್ರೂಪ್ ಆಫ್ ಕಂಪನೀಸ್ ಆಶ್ರಯದಲ್ಲಿ ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪಂ. ಅರ್ಜುನಸಾ ನಾಕೋಡ ಸಂಗೀತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತೀಯ ಕಲಾ ಪರಂಪರೆಯಲ್ಲಿ ಸಂಗೀತಕ್ಕೆ ಮಹತ್ತರ ಸ್ಥಾನವಿದೆ. ಹಾಗಾಗಿಯೇ ಸರ್ವಕಾಲದಲ್ಲೂ ಸರ್ವರಿಗೂ ಇಷ್ಟವಾಗುವಂಥ ದೊಡ್ಡ ಕಲೆ ಎಂದು ವಿವರಿಸಿದರು.

ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ ಮಾತನಾಡಿ, ಸಂಗೀತ ಕ್ಷೇತ್ರದ ದಿಗ್ಗಜರ ನಾಡು ಹುಬ್ಬಳ್ಳಿ-ಧಾರವಾಡ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಭಾರತೀಯ ಕಲೆಯಾಗಿದೆ. ಸ್ವಾತಂತ್ರ್ಯಾ ನಂತರ ಸಂಗೀತಕ್ಕೆ ರಾಜಾಶ್ರಯ ತಕ್ಕ ಮಟ್ಟಿಗೆ ದೊರೆತಿಲ್ಲ ಎಂದು ಖೇದ ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ಸಂಸ್ಕೃತಿ ನಡುವೆ ನಮ್ಮದೇ ಆಗಿರುವ ಸಂಗೀತ ಕಳೆಗುಂದಬಾರದು. ಈ ಉದ್ದೇಶದಿಂದ ನಾಕೋಡ ಕುಟುಂಬಸ್ಥರು ಪಂ. ಅರ್ಜುನಸಾ ನಾಕೋಡ ಅವರ ಹೆಸರಿನಲ್ಲಿ ಸಂಗೀತ ಮಹೋತ್ಸವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಎಂಎಲ್‌ಸಿ ಲಿಂಗರಾಜ ಪಾಟೀಲ, ಎಸ್‌ಎಸ್‌ಕೆ ಸಮಾಜದ ಮುಖಂಡ ಸತೀಶ ಮೆಹರವಾಡೆ, ಟ್ರಸ್ಟ್ ಅಧ್ಯಕ್ಷ ಪಂ. ಬಾಲಚಂದ್ರ ನಾಕೋಡ, ರಂಗಾ ಬದ್ದಿ, ಸಂತೋಷ ಶೆಟ್ಟಿ, ಶಂಕರಣ್ಣ ಮುನವಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಮೀರಾ ಮೆಹರವಾಡೆ, ಧೀರನ್ ಠಕ್ಕರ್, ಸಾಯಿ ನಾಕೋಡ ಇತರರಿದ್ದರು.

ನಂತರ ಜರುಗಿದ ಸಂಗೀತ ಮಹೋತ್ಸವವು ಎಲ್ಲರನ್ನೂ ನಾದಲೋಕದಲ್ಲಿ ತೇಲುವಂತೆ ಮಾಡಿತು.