

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಬಳಿಯ ಉತ್ತರ ಕರ್ನಾಟಕದ ಮನೆಮಾತಾದ ಪ್ರೀತಿ ಸಿಲ್ಕ್ಸ್ ನೂತನ ಫ್ಲಾೃಗ್ಶಿಪ್ ಶೋರೂಂ ಅನ್ನು ಕನ್ನಡ ರಾಜ್ಯೋತ್ಸವ ದಿನವಾದ ಭಾನುವಾರ ಅದ್ದೂರಿಯಾಗಿ ಉದ್ಘಾಟಿಸಲಾಯಿತು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಪ್ರೀತಿ ಸಿಲ್ಕ್ಸ್ನವರು ಆಧುನಿಕತೆಗೆ ತಕ್ಕಂತೆ ಬದಲಾವಣೆ, ಹೊಸತರು ಹಾಗೂ ಬೆಳವಣಿಗೆ ಬಯಸುತ್ತಾರೆ. ಹಾಗಾಗಿಯೇ ಗ್ರಾಹಕರ ಮನಸ್ಸು ಹಿಡಿದಿಟ್ಟುಕೊಳ್ಳುತ್ತಾರೆ. ಅರಮನೆಯನ್ನೇ ನಾಚಿಸುವಂಥ ಭವ್ಯ ಶೋರೂಂ ಆರಂಭಿಸಿದ್ದು, ಇದರಲ್ಲಿ ಬಟ್ಟೆ ಮತ್ತು ಬೆಳ್ಳಿ ಆಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ. ನಮ್ಮ ಜನರು ವಿಭಿನ್ನ ಬಟ್ಟೆಗಳನ್ನು ತೊಡಬೇಕು ಎಂಬ ಆಶಯ ಅವರದು ಎಂದರಲ್ಲದೆ, ನೌಕರರನ್ನೂ ಕುಟುಂಬದವರಂತೆ ನೋಡುವ ಗುಣ ಮಾಲೀಕರಲ್ಲಿದೆ ಎಂದು ಶ್ಲಾಘಿಸಿದರು.
ಮಣಕವಾಡದ ಶ್ರೀ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಭಂಡಾರಿ ಕುಟುಂಬದವರು ರಾಜಸ್ಥಾನದಿಂದ ಬಂದು ಇಲ್ಲಿ ವ್ಯಾಪಾರ ಮಾಡುತ್ತಿದ್ದರೂ ಅವರಲ್ಲಿ ಕನ್ನಡ ಭಾಷೆ ಹಾಸುಹೊಕ್ಕಾಗಿದೆ. ಕನ್ನಡ ಉಳಿಸಿ, ಬೆಳೆಸ್ತೀವಿ ಎನ್ನುವವರ ಮಧ್ಯೆ ಬಳಸುತ್ತೇವೆ ಎನ್ನುವ ಗುಣ ಅವರಲ್ಲಿದೆ. ತಾವು ಬದುಕುವುದಲ್ಲದೆ ಇತರರೂ ಜೀವಿಸಲಿ ಎನ್ನುವ ಬಹುದೊಡ್ಡ ಮನೋಭಾವ ಅವರಲ್ಲಿದೆ. ಅದ್ಭುತ ಬಟ್ಟೆ ಹಾಗೂ ಬೆಳ್ಳಿ ಆಭರಣಗಳ ಶೋರೂಂ ಅನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿರುವುದು ಶ್ಲಾಘನೀಯ ಎಂದರು.
ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಶೋರೂಂ ಮುಂದೆ ಕನ್ನಡ ಧ್ವಜಾರೋಹಣ ನೆರವೇರಿಸಿ, ಪತ್ನಿ ಶಿಲ್ಪಾ ಶೆಟ್ಟರ್ ಅವರೊಂದಿಗೆ ಶೋರೂಂ ವೀಕ್ಷಿಸಿದರು. ವಿಭಿನ್ನ ವಿನ್ಯಾಸದ ವಸ್ತ್ರಗಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.
ಆಚಾರ್ಯ ಶ್ರೀ ರಾಚಂದ್ರ ಸೂರೀಜಿ ಸ್ವಾಮೀಜಿಯವರು ವಿಡಿಯೋ ಕಾಲ್ ಮೂಲಕ ನೂತನ ಶೋರೂಂಗೆ ಶುಭಕೋರಿದರು.
ಮಾಲೀಕರಾದ ಮಹೇಶ ಭಂಡಾರಿ, ರಾಹುಲ್ ಭಂಡಾರಿ, ರಜತ್ ಭಂಡಾರಿ, ಭಂಡಾರಿ ಕುಟುಂಬದವರಾದ ಶಾಂತಿಲಾಲ್ ಭಂಡಾರಿ, ಪ್ರಕಾಶ ಚಂದ್, ವಿಮಲ್ ಚಂದ್, ಕಿರಣ ಚಂದ್, ಇತರರು ಭಾಗವಹಿಸಿದ್ದರು.