

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಭಾನುವಾರ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ಉಚ್ಚಾಟಿತ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮುಖಾಮುಖಿ ಭೇಟಿಯಾಗಿರುವುದು ಕುತೂಹಲ ಮೂಡಿಸಿದೆ.
ಛಬ್ಬಿಯಲ್ಲಿ ಮೊದಲು ಧಾರ್ಮಿಕ ಕಾರ್ಯಕ್ರಮ ಮುಗಿಸಿ ಹೊರ ನಡೆದಿದ್ದ ಯತ್ನಾಳ ಅವರು, ಗ್ರಾಮದ ಪರಿಚಿತರೊಬ್ಬರ ಮನೆಗೆ ಆರೋಗ್ಯ ವಿಚಾರಿಸಲು ತೆರಳಿದ್ದರು. ಹುಬ್ಬಳ್ಳಿಗೆ ಆಗಮಿಸಿದ್ದ ವಿಜಯೇಂದ್ರ ಅವರೂ ಅದೇ ಮನೆಗೆ ತೆರಳಿದರು. ಈ ವೇಳೆ ಇಬ್ಬರೂ ಮುಖಾಮುಖಿ ಭೇಟಿಯಾದರು. ಮನೆಯಲ್ಲಿ ಕೆಲಹೊತ್ತು ಕುಳಿತು ಉಭಯ ಕುಶಲೋಪರಿ ನಡೆಸಿದರು ಎನ್ನಲಾಗಿದೆ.
ಈ ಕಡೆ ಬಂದೀರಲ್ರೀ ಗೌಡ್ರೆ, ಮುಂದೆ ಎಲ್ಲಿಗೆ ಹೊರಟಿದ್ದೀರಿ? ಎಂದು ವಿಜಯೇಂದ್ರ ಕೇಳಿದರೆ, ತಮ್ಮ ಪಿಎ ಬಳಿ ಇದ್ದ ಡೈರಿ ನೋಡಿದ ಯತ್ನಾಳ, ಇಂಥ ಊರುಗಳಿಗೆ ಹೊರಟಿದ್ದೀನಿ... ಎಂಬುದು ಸೇರಿ ಇತರ ಮಾತುಗಳನ್ನು ಆಡಿದರು. ಇದರ ಮಧ್ಯೆ ತಾವು ಬಂದಿದ್ದ ಧಾರ್ಮಿಕ ಕಾರ್ಯಕ್ರಮ, ಮತ್ತದರ ಮಹತ್ವವನ್ನು ಯತ್ನಾಳ ವಿವರಿಸಿದರು. ಇದಕ್ಕೆ ತಲೆಯಲ್ಲಾಡಿಸಿದ ವಿಜಯೇಂದ್ರ, ಹೌದು ನನಗೂ ಇದರ ಬಗ್ಗೆ ಮಾಹಿತಿ ಇದೆ. ಹಿಂದುತ್ವ ಅಚಲವಾಗಿದೆ ಎಂದರು.
ಯತ್ನಾಳ ಅವರಿಗಿಂತ ವಿಜಯೇಂದ್ರ ಅವರೇ ಹೆಚ್ಚು ಮಾತನಾಡಿದರೆ, ಅವರ ಮಾತುಗಳನ್ನು ತದೇಕಚಿತ್ತದಿಂದ ಯತ್ನಾಳ ಕೇಳಿದರು. ಆಗಾಗ ಹೊರಟ ಮಾತುಗಳು ನಗೆಗಡಲಲ್ಲಿ ತೇಲಿಸಿದವು. ಸುತ್ತಲಿದ್ದವರಿಗೆ ಇವರ ಮಾತು, ಗಂಭೀರತೆ, ಲಘುನಗುಗಳು ಕುತೂಹಲಕ್ಕೆ ಕಾರಣವಾಗಿದ್ದವು ಎಂದು ಮೂಲಗಳು ತಿಳಿಸಿವೆ.