

ಹುಬ್ಬಳ್ಳಿ: ‘ಬೃಂದಾವಿಹಾರಿ’ ಕನ್ನಡ ಚಲನಚಿತ್ರವು ನ. 20ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನಚಿತ್ರವು ಐತಿಹಾಸಿಕ ಕಥಾ ಹಂದರವನ್ನು ಹೊಂದಿದೆ. ನಾನು ಮಾಧವನ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದರು.
ನನ್ನ 20 ವರ್ಷಗಳ ಚಿತ್ರರಂಗದ ಪಯಣದಲ್ಲಿ, ಸಂಸಾರಿಕ, ಪ್ರೇಮ ಕಥಾ ಹಂದರ ಇರುವ ಇತ್ಯಾದಿ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವು ವಿಭಿನ್ನವಾಗಿದೆ. ಚಿತ್ರವೊಂದು ಯಶಸ್ವಿಯಾಗಲು ನಿರ್ದಿಷ್ಟ ಸೂತ್ರವಿಲ್ಲ. ಆ ಕಾಲದ ಪ್ರೇಕ್ಷಕರ ಮನಸ್ಥಿತಿ ಮತ್ತು ನಿರ್ಮಾಪಕರ ಆಶಯಗಳು ಒಂದಾದಾಗ ಮಾತ್ರ ಚಿತ್ರ ಯಶಸ್ಸು ಕಾಣಲು ಸಾಧ್ಯ. ನಮ್ಮ ಕಥೆಗಳನ್ನು ಬೇರೆ ಊರು ಹಾಗೂ ದೇಶಗಳ ಪ್ರೇಕ್ಷಕರೂ ವೀಕ್ಷಿಸಬೇಕೆಂಬುದು ನಮ್ಮ ಆಶಯವಾಗಿದೆ ಎಂದರು.
ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, ಬೃಂದಾವಿಹಾರಿ ಸಂಗೀತಮಯ ಪ್ರೇಮ ಕಥೆಯಾಗಿದೆ. ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡುವ ಉದ್ದೇಶದಿಂದ ಈ ಚಿತ್ರ ರೂಪಿಸಲಾಗಿದೆ ಎಂದರು.
ನಾಯಕಿ ಮಾಳವಿಕ ಶರ್ಮಾ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಅಭಿನಯಿಸಲು ಅವಕಾಶ ನೀಡಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಮೊದಲ ಬಾರಿಗೆ ಚಿತ್ರದ ಕಥೆ ಕೇಳಿದಾಗ ತುಂಬಾ ಸಂತೋಷವಾಗಿತ್ತು. ಕಥೆ ಇಷ್ಟವಾದ ಕಾರಣ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ ಎಂದರು.
ಮತ್ತೊಬ್ಬ ನಾಯಕಿ ದೇವಿಕಾ ಭಟ್ ಮಾತನಾಡಿ, ಗೋಲ್ಡನ್ ಸ್ಟಾರ್ ಗಣೇಶ ಅವರ ಚಿತ್ರಗಳನ್ನು ಸಿನಿಪ್ರಿಯರು ಪ್ರೀತಿಯಿಂದ ಸ್ವಾಗತಿಸುತ್ತಾರೆ. ನ. 20ರಂದು ಬಿಡುಗಡೆಯಾಗಲಿರುವ ಬೃಂದಾವಿಹಾರಿ ಚಿತ್ರವನ್ನು ಚಿತ್ರಮಂದಿರಗಳಲ್ಲಿಯೇ ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ನಿರ್ಮಾಪಕ ಸಮೃದ್ಧಿ ವಿ. ಮಂಜುನಾಥ ಮಾತನಾಡಿ, ಇನಾಂವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆಯ ಘಟನೆ ಆಧರಿಸಿ ಚಿತ್ರ ನಿರ್ಮಿಸುವ ಯೋಜನೆ ಇದೆ. ಈ ಕುರಿತು ಕಥೆ ಸಿದ್ಧಪಡಿಸಲಾಗುತ್ತಿದ್ದು, ಕರ್ನಾಟಕ ಮತ್ತು ಆಂಧ್ರಪ್ರದೇಶದ ಹಿನ್ನೆಲೆಯನ್ನು ಒಳಗೊಂಡ ಕಥಾಹಂದರ ರೂಪಿಸಲಾಗುತ್ತಿದೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುವುದು ಎಂದರು.