

ಹುಬ್ಬಳ್ಳಿ: ನಿತ್ಯ ಒತ್ತಡ ಕೆಲಸ ಮಧ್ಯೆಯೂ ಪೊಲೀಸರು ದೈಹಿಕ ವ್ಯಾಯಾಮಕ್ಕೆ ಒತ್ತು ನೀಡಬೇಕು. ಪೊಲೀಸರು ಸದೃಢ ಆರೋಗ್ಯ ಹೊಂದುವುದು ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ಇಲ್ಲಿಯ ಗೋಕುಲ ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಕವಾಯತ ಮೈದಾನದಲ್ಲಿ ಪೋಲಿಸ್ ಆಯುಕ್ತಾಲಯ ವತಿಯಿಂದ ಶನಿವಾರ ಏರ್ಪಡಿಸಿದ್ದ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು.
ಪೊಲೀಸರು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾ ಸ್ಫೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದರು.
ಪರೇಡ ಕಮಾಂಡರ್ ಆರ್ಪಿಐ ನಾಗರಾಜ ಪಾಟೀಲ ನೇತೃತ್ವದಲ್ಲಿ ಉತ್ತರ ವಿಭಾಗ, ದಕ್ಷಿಣ ವಿಭಾಗ, ಮಹಿಳಾ ವಿಭಾಗ, ಸಿ.ಎ.ಆರ್. ವಿಭಾಗ, ಸಂಚಾರ ವಿಭಾಗ ಮತ್ತು ಧಾರವಾಡ ವಿಭಾಗದ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿದವು.
ದಕ್ಷಿಣ ವಿಭಾಗ ತಂಡ ‘ಟೀಮ್ ಚಾಂಪಿಯನ್’ ಆಗಿ ಹೊರಹೊಮ್ಮಿತು. ಆರ್. ವೆಂಕಟೇಶ ನಾಯಕ ಮತ್ತು ಸುಷ್ಮಿತಾ ಪಾಟೀಲ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಪೊಲೀಸ್ ಆಯುಕ್ತ ಭೂಷಣ ಬೋರಸೆ, ಡಿಸಿಪಿಗಳಾದ ಎನ್.ಎಸ್. ಶ್ರುತಿ, ವಿಜಯಕುಮಾರ ತಳವಾರ, ಎಸಿಪಿಗಳಾದ ಯು.ಬಿ. ಚಿಕ್ಕಮಠ, ಶಿವಪ್ರಕಾಶ ನಾಯಕ, ಪೊಲೀಸ ಇಲಾಖೆಯ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕುಟುಂಬಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.
ನಿಖಿಲ್ ನಾಯಕ ಮತ್ತು ಪೂರ್ಣಿಮಾ ಕುಂಬಾರ ನಿರೂಪಿಸಿದರು.