

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಇ-ಮೇಲ್ ಐಡಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಸೋಮವಾರ ಬೆಳಗ್ಗೆ ಬಂದಿದ್ದು, ದೀಪಾವಳಿ ಹಬ್ಬದ ದಿನದಂದು ಕೆಲಹೊತ್ತು ಆತಂಕ ಮನೆ ಮಾಡಿತ್ತು.
ಬೆದಿಕೆ ಇ-ಮೇಲ್ ಬಂದಿದ್ದರಿಂದ ಪಾಲಿಕೆ ಕಚೇರಿಗೆ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (ಬಿಡಿಡಿಎಸ್) ಮತ್ತು ಶ್ವಾನದಳ ಭೇಟಿ ನೀಡಿ ತಪಾಸಣೆ ನಡೆಸಿತು. ಆಯುಕ್ತರ ಕಟ್ಟಡ ಮತ್ತು ಸಭಾಭವನದ ಕಟ್ಟಡವನ್ನು ಪರಿಶೀಲಿಸಿತು.
ಡಿಸಿಪಿ ಶ್ರುತಿ ಎನ್.ಎಸ್. ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಪಾಲಿಕೆಯಲ್ಲಿ ಪರಿಶೀಲನೆ ಮಾಡಿ, ಮಹಾಪೌರ ದುರ್ಗಮ್ಮ ಬೆಜವಾಡ ಅವರ ಚತೆ ಚರ್ಚಿಸಿತು.
‘ವೆಯಿ ಸ್ಮಿತ್3727’ ಎಂಬ ಹೆಸರಿನಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಸೋಮವಾರ ಬೆಳಗ್ಗೆ 11.35ರ ಸುಮಾರಿಗೆ ಇ-ಮೇಲ್ ಮೂಲಕ ಬಾಂಬ್ ಸ್ಫೋಟದ ಬೆದರಿಕೆ ಸಂದೇಶ ರವಾನೆಯಾಗಿತ್ತು. ಖಲಿಸ್ತಾನ ಪರ ಘೋಷಣೆಗಳ ಜತೆಗೆ ಹಲವು ಗಂಭೀರ ಬೆದರಿಕೆಗಳನ್ನು ಇ-ಮೇಲ್ನಲ್ಲಿ ಉಲ್ಲೇಖಿಸಲಾಗಿದೆ.
ನ. 29ರಂದು ಬೆಂಗಳೂರಿನ ನೈಸ್ ಸೆಂಟರ್ ಸ್ಟೇಜ್ನಲ್ಲಿ ನಡೆಯಲಿರುವ ದಲ್ಜಿತ್ ದೋಸಾಂಜ್ ಕಾರ್ಯಕ್ರಮದ ಸ್ಥಳದಲ್ಲಿ ಸ್ಫೋಟ ನಡೆಸುವುದಾಗಿ ಇ-ಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ. ಅಲ್ಲದೆ, ನ. 27ರಂದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮನೆ ಸಮೀಪ ಸ್ಫೋಟಿಸುವುದಾಗಿಯೂ ವಿವರಿಸಲಾಗಿದೆ.
ಬೆಂಗಳೂರು ಮೆಟ್ರೋ ನಿಲ್ದಾಣದಲ್ಲಿ ಸ್ಫೋಟಕ ಇರಿಸಿರುವುದಾಗಿ ಹಾಗೂ ನ. 29ರಂದು ಮೆಟ್ರೋದಲ್ಲಿ ಪ್ರಯಾಣಿಸದಂತೆ ಎಚ್ಚರಿಕೆ ಯ ಸಂದೇಶ ಇ-ಮೇಲ್ ಮೂಲಕ ನೀಡಲಾಗಿದೆ. ಖಲಿಸ್ತಾನ ನ್ಯಾಷನಲ್ ಆರ್ಮಿ ಹೆಸರಿನಲ್ಲಿ ಮೇಲ್ ಮಾಡಲಾಗಿದೆ. ಹಲವರ ಹೆಸರುಗಳನ್ನೂ ಉಲ್ಲೇಖಿಸಲಾಗಿದೆ. ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಭೂಷಣ ಬೋರಸೆ ಪ್ರತಿಕ್ರಿಯಿಸಿ, ಇ-ಮೇಲ್ನ ವಿಷಯ ಹಾಗೂ ಹೆಡರ್ಗಳನ್ನು ವಿಶ್ಲೇಷಿಸಲಾಗುತ್ತಿದೆ. ಇ-ಮೇಲ್ ಸೇವಾ ಪೂರೈಕೆದಾರರೊಂದಿಗೆ ಅಗತ್ಯ ಪತ್ರ ವ್ಯವಹಾರ ಮಾಡಲಾಗುವುದು. ಶ್ವಾನದಳ ಹಾಗೂ ಬಿಡಿಡಿಎಸ್ ತಂಡದೊಂದಿಗೆ ಪಾಲಿಕೆಯ ಎರಡು ಕಟ್ಟಡ ಹಾಗೂ ಇತರ ಪ್ರಮುಖ ಸ್ಥಳಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋಟ್...
ಪೊಲೀಸ್ಸಿಬ್ಬಂದಿ ಎಲ್ಲ ಕಡೆ ತಪಾಸಣೆ ಮಾಡಿದ್ದಾರೆ. ಎಲ್ಲಿಯೂ ಏನೂ ಸಿಕ್ಕಿಲ್ಲ. ಇದೊಂದು ಹುಸಿ ಮೇಲ್ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಆದರೆ, ಇ-ಮೇಲ್ನಿಂದಾಗಿ ಜನತೆ ಒಂದಷ್ಟು ಆತಂಕಗೊಂಡಿದ್ದಾರೆ. ಪೊಲೀಸ್ ಆಯುಕ್ತರು ಸೂಕ್ತ ತನಿಖೆ ನಡೆಸಿ ಮೇಲ್ ಕಳುಹಿಸಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
-ದುರ್ಗಮ್ಮ ಬೆಜವಾಡ, ಮೇಯರ್