ಹುಬ್ಬಳ್ಳಿ: ಪಂಚ ಗ್ಯಾರಂಟಿ ಯೋಜನೆಗಳ ಹೆಸರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಒಂದಿಲ್ಲೊಂದು ಬೆಲೆ ಏರಿಕೆ ಮಾಡುತ್ತಿದೆ. ರಾಜ್ಯದ ಜನರಿಗೆ ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆಯ ಉಡುಗೊರೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲು, ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್, ನೀರು, ಮದ್ಯ ಸೇರಿದಂತೆ ಹಲವು ಅಗತ್ಯ ಸೇವೆಗಳ ದರವನ್ನು ಸರ್ಕಾರ ಪದೇ ಪದೆ ಹೆಚ್ಚಿಸಿದೆ. ಪೆಟ್ರೋಲ್, ಡೀಸೆಲ್ ದರವನ್ನು ಮೂರು ಬಾರಿ, ಬಸ್ ಪ್ರಯಾಣ ದರವನ್ನು ಎರಡು ಬಾರಿ ಏರಿಕೆ ಮಾಡಿದೆ. ನೀರಿನ ದರ ಶೇ. 10, ಒಳಚರಂಡಿ ಶುಲ್ಕ ಶೇ. 25, ಮದ್ಯದ ಬೆಲೆ ಶೇ. 20 ಹಾಗೂ ಪರವಾನಗಿ ಶುಲ್ಕ ಶೇ. 50ರಷ್ಟು ಹೆಚ್ಚಳವಾಗಿದೆ ಎಂದು ಛೇಡಿಸಿದರು.
ವಿವಿಧ ತೆರಿಗೆ ಮತ್ತು ಶುಲ್ಕಗಳ ಹೆಚ್ಚಳದಿಂದ ಸರ್ಕಾರಕ್ಕೆ ವಾರ್ಷಿಕ 60 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಬರುವ ಅಂದಾಜಿದೆ. ಪೆಟ್ರೋಲ್-ಡೀಸೆಲ್ ದರ ಹೆಚ್ಚಳದಿಂದ 6 ಸಾವಿರ ಕೋಟಿ ರೂ., ಬಸ್ ಪ್ರಯಾಣ ದರದಿಂದ 1 ಸಾವಿರ ಕೋಟಿ ರೂ., ವಾಹನ ನೋಂದಣಿ ಶುಲ್ಕದಿಂದ 3,712 ಕೋಟಿ ರೂ., ಮೆಟ್ರೋ ದರದಿಂದ 450 ಕೋಟಿ ರೂ. ಹಾಗೂ ಆಸ್ತಿ ಮಾರ್ಗಸೂಚಿ ದರ ಹೆಚ್ಚಳದಿಂದ 5 ಸಾವಿರ ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ವಿದ್ಯುತ್ ದರ ಹೆಚ್ಚಳದಿಂದಲೂ ಸಾವಿರಾರು ಕೋಟಿ ಆದಾಯ ಸರ್ಕಾರದ ಬೊಕ್ಕಸಕ್ಕೆ ಸಂಗ್ರಹವಾಗಲಿದೆ. ಜನರ ಮೇಲೆ ಇಷ್ಟೊಂದು ಹೊರೆ ಹಾಕಿ ಕೇಂದ್ರ ಸರ್ಕಾರದ ಮೇಲೆ ಬೆಲೆ ಏರಿಕೆಯ ಆರೋಪ ಮಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳ ವೆಚ್ಚ ನಿರ್ವಹಿಸಲು ಸಾಧ್ಯವಾಗದೆ ಸರ್ಕಾರ ಜನರಿಂದ ವಿವಿಧ ರೂಪದಲ್ಲಿ ಹಣ ವಸೂಲಿ ಮಾಡುತ್ತಿದೆ. ಹಾಲಿನ ದರ ಹೆಚ್ಚಳದಿಂದ ರೈತರಿಗೆ ಲಾಭವಾಗಲಿದೆ ಎಂದು ಸರ್ಕಾರ ಹೇಳುತ್ತಿದೆ. ದರ ಏರಿಕೆಯ ಲಾಭ ರೈತರಿಗೆ ಒಂದಿನಿತೂ ತಲುಪುವುದಿಲ್ಲ. ಸರ್ಕಾರದ ಬೊಕ್ಕಸ ಭರ್ತಿಗೆ ಮಾಡಿದ ದರ ಹೆಚ್ಚಳವಿದು ಎಂದು ತಿವಿದರು.
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಹೊಸ ಪ್ರಕ್ರಿಯೆಯಲ್ಲ. ದೇಶದಲ್ಲಿ ಹಲವು ದಶಕಗಳಿಂದ ನಡೆದು ಬಂದಿದೆ. ಈಗ ತಂತ್ರಜ್ಞಾನದ ನೆರವಿನಿಂದ ನಡೆಯುತ್ತಿದೆ. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸುವವರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿದೆ. ಆದರೆ ಕಾಂಗ್ರೆಸ್ ಚುನಾವಣಾ ಆಯೋಗದ ಪ್ರಕ್ರಿಯೆ ಬಗ್ಗೆ ಸುಳ್ಳು ಪ್ರಚಾರ ನಡೆಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ಟೀಕಿಸಿದರು.
ಎಸ್‌ಐಆರ್‌ಗೂ ಮುನ್ನವೇ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸೋತಿದೆ. ತಮಿಳುನಾಡಿನಲ್ಲಿ 1967ರಿಂದ, ಪಶ್ಚಿಮ ಬಂಗಾಳದಲ್ಲಿ 1977ರಿಂದ ಕಾಂಗ್ರೆಸ್, ಅಧಿಕಾರದಿಂದ ದೂರವಿದೆ. ಹೀಗಿರುವಾಗ ಸೋಲಿಗೆಲ್ಲ ಚುನಾವಣಾ ವ್ಯವಸ್ಥೆಯನ್ನೇ ಹೊಣೆ ಮಾಡುವುದು ಸರಿಯಲ್ಲ. ಲಿಸ್ಟ್‌ನಿಂದ ಹೊರಗಿಟ್ಟವರಲ್ಲಿ ಸತ್ತವರೂ ಇದ್ದಾರೆ. ಲೋಕಸಭೆ ಪ್ರತಿಪಕ್ಷ ನಾಯಕ ಅಲ್ಲಿಗೆ ಹೋಗಿ ಅವರನ್ನೂ (ಸತ್ತವರನ್ನೂ) ಕರೆದುಕೊಂಡು ಬಂದು ಹೆಸರು ಸೇರಿಸಲಿ ಎಂದು ತಿವಿದರು.
ಪೆಟ್ರೋಲ್‌ನಲ್ಲಿ ಶೇ. 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಆರೋಪವೂ ಆಧಾರರಹಿತ. ಪ್ರಸ್ತುತ ನಿಗದಿತ ನೀತಿಯಂತೆ ಶೇ. 20ರಷ್ಟು ಮಿಶ್ರಣದ ಗುರಿ ಜಾರಿಯಲ್ಲಿದೆ. ಪರೀಕ್ಷೆಗೆ ಸಂಗ್ರಹಿಸಿದ 63 ಮಾದರಿಗಳ ಪೈಕಿ ಪ್ರಕಟಿಸಿರುವ 14 ಫಲಿತಾಂಶಗಳಲ್ಲಿ 11 ಮಾದರಿಗಳು ನಿಗದಿತ ಮಿತಿಯಲ್ಲಿವೆ. ಎಥೆನಾಲ್ ಮಿಶ್ರಣದಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವುದರ ಜತೆಗೆ ವಿದೇಶಿ ತೈಲ ಆಮದು ಅವಲಂಬನೆಯೂ ಕಡಿಮೆಯಾಗಲಿದೆ. ಸಕ್ಕರೆ ಕಾರ್ಖಾನೆಗಳಿಗೆ ಎಥೆನಾಲ್ ಮಾರಾಟದಿಂದ ಬರುವ ಹಣ ರೈತರಿಗೆ ತಲುಪಬೇಕು ಎಂದು ಹೇಳಿದರು.