ಡಿಜೆ ಅಬ್ಬರದೊಂದಿಗೆ ಗಣೇಶನಿಗೆ ವಿದಾಯ

DJ procession held in Dharwad
ಧಾರವಾಡದಲ್ಲಿ ಮಂಗಳವಾರ ಸಂಜೆ ಸಾರ್ವಜನಿಕ ಗಣೇಶ ಮೂತಿರ್ಗಳ ವಿಸರ್ಜನೆಗೂ ಮೊದಲು ಡಿಜೆ ಮೆರವಣಿಗೆ ನಡೆಸಲಾಯಿತು.
Published on

ಧಾರವಾಡ: ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮಂಡಳಿಗಳು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಗಳನ್ನು 9ನೇ ದಿನವಾದ ಮಂಗಳವಾರ ಸಂಜೆ ವಿಸರ್ಜನೆ ಮಾಡಲಾಯಿತು.

ಇಲ್ಲಿನ ಉಪನಗರ, ವಿದ್ಯಾಗಿರಿ ಮತ್ತು ಶಹರ ಠಾಣೆಗಳ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ್ದ ಸುಮಾರು 40 ಗಣೇಶನ ಬೃಹತ್​ ಮೂರ್ತಿಗಳನ್ನು ಟ್ರ್ಯಾಕ್ಟರ್​ಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಂಜೆ 6 ಗಂಟೆಗೆ ಆರಂಭವಾದ ಮೆರವಣಿಗೆಯಲ್ಲಿ ನೂರಾರು ಜನ ಪಾಲ್ಗೊಂಡಿದ್ದರು. ಗಣೇಶನ ಮೂರ್ತಿಗಳನ್ನು ಇಟ್ಟಿದ್ದ ಟ್ರ್ಯಾಕ್ಟರ್​ಗಳ ಮುಂದೆ ಜನ ಕುಣಿಯುತ್ತ ಸಾಗಿದರು. ದಾರಿಯುದ್ದಕ್ಕೂ ಪಟಾಕಿಗಳ ಸದ್ದು ಜೋರಾಗಿತ್ತು.

ಡಿಜೆಗಳ ಅಬ್ಬರದೊಂದಿಗೆ ಗಣೇಶು ಮೆರವಣಿಗೆ ಮಾಡಿ ನಗರದ ನುಚ್ಚಂಬ್ಲಿ ಬಾವಿಯಲ್ಲಿ ವಿಸರ್ಜನೆ ಮಾಡಿದರು. ಬಾವಿಯ ಬಳಿ ಪಾಲಿಕೆಯಿಂದ ಬೃಹತ್​ ಕ್ರೇನ್​ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ಪೌರ ಕಾಮಿರ್ಕರು ಸಣ್ಣ ಮೂತಿರ್ಗಳ ವಿಸರ್ಜನೆಗೆ ನೆರವಾದರು.

ಪೊಲೀಸ್​ ಬಂದೋಬಸ್ತ್​: ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ನಿಗಾ ವಹಿಸಲಾಗಿತ್ತು. ಇಲ್ಲಿನ ಉಪನಗರ, ವಿದ್ಯಾಗಿರಿ ಮತ್ತು ಶಹರ ಠಾಣೆಗಳ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆಗೆ ಬಂದೋಬಸ್ತ್​ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net