

ಹುಬ್ಬಳ್ಳಿ: ಗಾಂಜಾ ಸಾಗಣೆ ಹಾಗೂ ಅಕ್ರಮ ಮಾರಾಟ ಪ್ರಕರಣದಡಿ ಇಬ್ಬರಿಗೆ ಧಾರವಾಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಗಂಗಾಧರ ನಗರದ ಬಸವರಾಜ ಭಜಂತ್ರಿ (31), ಶಿವರಾಜ ಗಜಕೋಶ (28) ಶಿಕ್ಷೆಗೆ ಗುರಿಯಾದವರು. 2023ರಲ್ಲಿ ಕಾರವಾರ ರಸ್ತೆ ಸೇತುವೆ ಬಳಿಯ ಸರ್ವಿಸ್ ರಸ್ತೆಯಲ್ಲಿ ಆಟೋರಿಕ್ಷಾದಲ್ಲಿ ಗಾಂಜಾ ಸಾಗಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು.
ಆಗ 11,500 ರೂ. ಮೌಲ್ಯದ 1154 ಗ್ರಾಂ ಗಾಂಜಾವನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ್ದ ಅಂದಿನ ಪಿಎಸ್ಐ ಆರ್.ಎನ್. ಗುಡದರಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು. ಸಾಕ್ಷಾೃಧಾರಗಳ ಆಧಾರದಲ್ಲಿ ಇಬ್ಬರ ವಿರುದ್ಧ ಆರೋಪ ಸಾಬೀತಾಗಿದ್ದು, ನ್ಯಾಯಾಲಯವು ಈ ಶಿಕ್ಷೆ ವಿಧಿಸಿದೆ.