ಧಾರವಾಡ: ನಗರದ ಭಾರತೀಯ ವಿದ್ಯಾ ಕೇಂದ್ರದ ಜಯದೇವಿತಾಯಿ ಬಾಲಿಕೆಯರ ಅನುದಾನಿತ ಪ್ರೌಢಶಾಲೆಯ ಕೊಠಡಿಯೊಂದನ್ನು ಸೋಮವಾರ ರಾತ್ರಿ ಏಕಾಏಕಿ ತೆರವುಗೊಳಿಸಲಾಗಿದೆ. ಧ್ವಂಸಗೊಂಡ ತರಗತಿಯ ಡೆಸ್ಕ್ಗಳನ್ನು ಹೊರಗೆ ಹಾಕಲಾಗಿದ್ದು, ವಿದ್ಯಾರ್ಥಿನಿಯರು ಆಟದ ಮೈದಾನದಲ್ಲಿ ಹಾಕಿರುವ ಪೆಂಡಾಲ್ ಅಡಿ ಪಾಠ ಕೇಳುವಂತಾಗಿದೆ.
1966ರಲ್ಲಿ ಆರಂಭಗೊಂಡ ಈ ಹಳೆಯ ಶಾಲೆಯಲ್ಲಿ 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಅನಿಲ ವೈದ್ಯ ಎಂಬುವರು ಈ ಹಳೇ ಶಾಲೆಯ ಪಕ್ಕದ ಒಂದು ಕೊಠಡಿಯ ಮೂಲ ಮಾಲೀಕರಾಗಿದ್ದರು. ಅವರು ಇತ್ತೀಚೆಗೆ ಹನುಮಂತಗೌಡ ಹಳೇಮನಿ ಎಂಬುವರಿಗೆ ಮಾರಾಟ ಮಾಡಿದ್ದರು. ಅವರು ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಜೆಸಿಬಿ ಬಳಸಿ ಕೊಠಡಿಯನ್ನು ತೆರವು ಮಾಡಿದ್ದಾರೆ. ಕೊಠಡಿಯಲ್ಲಿದ್ದ ಡೆಸ್ಕ್ಗಳನ್ನು ಶಾಲೆಯ ಮೈದಾನದಲ್ಲಿ ಇಟ್ಟಿದ್ದಾರೆ. ಈ ಜಾಗವನ್ನು ತಾವು ಖರೀದಿಸಿದ್ದರಿಂದ ಶಾಲೆಯವರು ವಹಿವಾಟು ಮಾಡುತ್ತಿದ್ದ ಕೊಠಡಿಯನ್ನು ತೆರವು ಮಾಡಿದ್ದೇವೆ ಎಂಬುದು ಮಾಲೀಕರ ವಾದ.
ಮತ್ತೊಂದೆಡೆ ಅನುದಾನಿತ ಶಾಲೆಗೆ ಸೈದಾಪುರದಲ್ಲಿ ನಿವೇಶನ ಮಂಜೂರಾಗಿದ್ದು, ಅಲ್ಲಿಗೆ ಸ್ಥಳಾಂತರವಾಗುತ್ತೇವೆ. ಆದರೆ, ನೋಟಿಸ್ ಕೂಡ ನೀಡದೆ ಕೊಠಡಿಯನ್ನು ತೆರವು ಮಾಡಿದ್ದಾರೆ ಎಂದು ಶಾಲಾ ಆಡಳಿತ ಮಂಡಳಿಯವರು ಹೇಳಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ, ಡಿಡಿಪಿಐ ಹಾಗೂ ಬಿಇಒಗೆ ಮನವಿ ಸಲ್ಲಿಸಲಾಗಿದೆ. ಅಲ್ಲದೆ, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.