ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಂಧನ ಖಂಡಿಸಿ ಸಂಚಾರ ತಡೆ
congress protest
ರಾಹುಲ್ ಗಾಂಧಿ ಬಂಧನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಚಾರ ತಡೆ ನಡೆಸಿದರು.
Published on: 

ಹುಬ್ಬಳ್ಳಿ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಬಂಧನ ಖಂಡಿಸಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಇಲ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಸಂಚಾರ ತಡೆ ನಡೆಸಿದ ವೇಳೆ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.

ಇದಕ್ಕೂ ಮೊದಲು ಮಹಾನಗರ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹಗೂ ಕೇಂದ್ರ ಗೃಹ ಸಚಿವ ಅಮಿತ್‌ಷಾ ಅವರ ಕೈಗೊಂಬೆಯಾಗಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ ಕುಮಾರ, ತಮ್ಮ ಮನಸ್ಸಿಗೆ ತಿಳಿದಂತೆ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಆದ್ಯತೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ರಾಹುಲ್ ಗಾಂಧಿ ಅವರು ಅಂಕ-ಅಂಶಗಳ ಸಮೇತ ಮತದಾರರ ಮುಂದೆ ತೆರೆದಿಟ್ಟಿದ್ದರು. ಇವರ ನಡೆಯನ್ನು ಬಿಜೆಪಿಯವರು ಮೂದಲಿಸಿದ್ದರು. ಈಗ ರಾಹುಲ್ ಗಾಂಧಿ ಮಾತುಗಳು ಸತ್ಯವಾಗುತ್ತಿರುವುದರಿಂದ ಅವರ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಬಂಧನ ಮಾಡಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರದ ಪ್ರತಿಯೊಂದು ನಡೆಯೂ ಜನರ ದಾರಿ ತಪ್ಪಿಸುತ್ತಿದೆ. ಸಂಸತ್ತಿನಲ್ಲಿ ರಾಹುಲ್ ಗಾಂಧಿ ಅವರು ಈ ಕುರಿತು ಹೆಚ್ಚು ಹೆಚ್ಚು ಮಾತನಾಡುತ್ತಿದ್ದಾರೆ. ಸಾರ್ವಜನಿಕರ ಮುಂದೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದನ್ನು ಸಹಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ಷಾ ಅವರಿಗೆ ಸಹಿಸಲು ಆಗುತ್ತಿಲ್ಲ. ಹಾಗಾಗಿಯೇ ಪ್ರತಿಪಕ್ಷಗಳ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದ್ದಾರೆ. ಕೂಡಲೇ ರಾಹುಲ್ ಗಾಂಧಿ ಅವರನ್ನು ಬಿಡುಗಡೆ ಮಾಡಬೇಕು. ಇಲ್ಲವಾದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮೀಣ ಜಿಲ್ಲಾಧ್ಯಕ್ಷ ಚಂದ್ರಶೇಖರ ಜುಟ್ಟಲ ಮಾತನಾಡಿ, ಕೇಂದ್ರ ಸರ್ಕಾರವು ಜನರ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಧ್ವನಿ ಎತ್ತುವವರನ್ನೂ ಸಹಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಕೇಂದ್ರ ಸರ್ಕಾರವು ತನ್ನ ಎಲ್ಲ ಶಕ್ತಿಯನ್ನು ಪ್ರಯೋಗಿಸುವ ಮೂಲಕ ಪ್ರತಿಪಕ್ಷದವರನ್ನು ಕಟ್ಟಿಹಾಕುವ ಕೆಲಸ ಮಾಡುತ್ತಿದೆ. ಈ ತಂತ್ರಗಳು ಎಂದಿಗೂ ಫಲಿಸುವುದಿಲ್ಲ. ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ಕೂಡಲೇ ಕೈಬಿಡಬೇಕು. ರಾಹುಲ್ ಗಾಂಧಿ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹುಡಾ ಮಾಜಿ ಅಧ್ಯಕ್ಷ ಅನ್ವರ ಮುಧೋಳ ಮಾತನಾಡಿದರು.

ಪ್ರಮುಖರಾದ ಹಾಸಿಮ್ ಹಿಂಡಸಗೇರಿ, ದಾನಪ್ಪ ಕಬ್ಬೇರ, ಹಾಜಿ ಅಲಿ ಹಿಂಡಸಗೇರಿ, ಶಿವಾನಂದ ಮುತ್ತಣ್ಣವರ, ಶಿವಾನಂದ ಬೆಂತೂರ, ಇಲಿಯಾಸ್ ಮನಿಯಾರ್, ಅರ್ಜುನ ಪಾಟೀಲ, ಆರೀಫ ಭದ್ರಾಪುರ, ಯಾಸಿನ್ ಹಾವೇರಪೇಟ, ರೇಣುಕಾ ಕಳ್ಳಿಮನಿ, ಅಕ್ಕಮ್ಮ ಕಂಬಳಿ, ಪ್ರಭಾವತಿ ಹಾದಿಮನಿ, ಲಕ್ಷ್ಮೀ ಗುತ್ತೆ, ಸರ್ವಮಂಗಳಾ ಪೂಜಾರ, ದೇವಿಕಾ ಹುಬ್ಬಳ್ಳಿ, ಗೀತಾ ಹೊಸಮನಿ, ಸ್ನೇಹಾ ಜಾಧವ, ಇತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net