ಎಬಿವಿಪಿಯಿಂದ ಬೃಹತ್ ಜಾಗೃತಿ ಜಾಥಾ

ABVP PROTEST
‘ಪ್ರಜಾಪ್ರಭಾತ್ವ ಉಳಿಸಿ, ಅರಾಜಕತೆ ಅಳಿಸಿ’ ಘೋಷ್ಯವಾಕ್ಯದೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತ ನೇತೃತ್ವದಲ್ಲಿ ಹುಬ್ಬಳ್ಳಿಯಲ್ಲಿ ಮಂಗಳವಾರ ಬೃಹತ್ ಜಾಗೃತಿ ಜಾಥಾ ಜರುಗಿತು.
Published on: 

ಹುಬ್ಬಳ್ಳಿ: ‘ಪ್ರಜಾಪ್ರಭಾತ್ವ ಉಳಿಸಿ, ಅರಾಜಕತೆ ಅಳಿಸಿ’ ಘೋಷ್ಯವಾಕ್ಯದೊಂದಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕರ್ನಾಟಕ ಉತ್ತರ ಪ್ರಾಂತ ನೇತೃತ್ವದಲ್ಲಿ ನಗರದಲ್ಲಿ ಮಂಗಳವಾರ ಬೃಹತ್ ಜಾಗೃತಿ ಜಾಥಾ ಏರ್ಪಡಿಸಲಾಗಿತ್ತು.

ಇಲ್ಲಿಯ ವಿದ್ಯಾನಗರದ ಕಾಲೇಜೊಂದರಿಂದ ರಾಣಿ ಚನ್ನಮ್ಮ ವೃತ್ತದವರೆಗೂ ಜಾಥಾ ನಡೆಸಿದ ಕಾರ್ಯಕರ್ತರು, ಭಾರತ ಮಾತಾಕೀ ಜೈ ಎಂದು ಜಯಘೋಷ ಮೊಳಗಿಸಿದರು.

ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ್ ಕುಳಗೇರಿ ಮಾತನಾಡಿ, ಜೆನ್‌ಜೀಗಳ ಹೆಸರಿನಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶ ಕಾಯುವ ಸೈನಿಕರ ವಿರುದ್ಧ ಘೋಷಣೆ ಕೂಗಿದ್ದಾರೆ. ಇದನ್ನು ಎಬಿವಿಪಿ ಖಂಡಿಸುತ್ತದೆ ಎಂದರು.

ಸಂವಿಧಾನದಡಿ ಕಾರ್ಯನಿರ್ವಹಿಸುವ ಸಂವಿಧಾನ ಸಂಸ್ಥೆಗಳ ಮೇಲೆ ದೇಶದ ಪ್ರತಿಯೊಬ್ಬರಿಗೂ ಗೌರವವಿದೆ. ಆದರೆ, ಕೆಲವರು ತಮ್ಮ ಸ್ವಹಿತಾಸಕ್ತಿಗಾಗಿ ಅವುಗಳನ್ನು ಅವಮಾನಿಸುವ ಹಾಗೂ ಪ್ರಶ್ನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ ಮಾತನಾಡಿ, ಭಾರತ ಆರ್ಥಿಕವಾಗಿ ಬಲಿಷ್ಠವಾಗುತ್ತಿದ್ದು, ಅಭಿವೃದ್ಧಿ ಹೊಂದಿದ ದೇಶವಾಗುವ ದಿನಗಳು ಹತ್ತಿರ ಇವೆ. ಇದನ್ನು ವಿದೇಶಿ ಶಕ್ತಿಗಳಿಗೆ ಸಹಿಸಲು ಆಗುತ್ತಿಲ್ಲ. ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಹಕಾರದಿಂದ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ಮತಗಳ್ಳತನದ ಬಗ್ಗೆ ಮಾತನಾಡುವ ಕಾಂಗ್ರೆಸ್, ದೇಶದಲ್ಲಿ ಮೊದಲು ಎಸ್‌ಐಆರ್ ಮಾಡಿಸಿ ಮತದಾರರ ಹಕ್ಕು ಕಸಿದುಕೊಂಡಿದೆ. ಎಪಿಬಿಪಿ ಪ್ರಜಾಪ್ರಭುತ್ವ ಹಾಗೂ ದೇಶ ರಕ್ಷಣೆಗೆ ನಿಲ್ಲಲಿದೆ ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಢಾಂಗೆ ಮಾತನಾಡಿ, ಮತದಾರರ ವಿಶೇಷ ಪಟ್ಟಿ ಪರಿಷ್ಕರಣೆ ವಿರೋಧಿಸುವ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲಾಗುತ್ತಿದೆ. ಸಾಮಾಜಿಕ ಜಾಲತಾಣದ ಮೂಲಕ ಯುವ ಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳ ಎಚ್ಚೆತ್ತುಕೊಳ್ಳಬೇಕು ಎಂದರು.

ರಾಜ್ಯ ಸಹ ಕಾರ್ಯದರ್ಶಿಗಳಾದ ಅಭಿಷೇಕ ದೊಡ್ಮನಿ, ಹನುಮಂತ ಬಗಲಿ, ಸುಮಂಗಲಾ ಎ., ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಫಣಿ ರಾಘವೇಂದ್ರ, ರಾಜ್ಯ ಕಾರ್ಯಸಮಿತಿ ಸದಸ್ಯ ಸಿದ್ಧಾರ್ಥ ಕೋರಿ, ರಾಜ್ಯ ಸಹ ಸಂಚಾಲಕ ಅಥರ್ವ ಚವ್ಹಾಣ, ಹುಬ್ಬಳ್ಳಿ ನಗರ ಸಹ ಕಾರ್ಯದರ್ಶಿ ಮನೋಜ ವಾಲ್ಮೀಕಿ, ಪ್ರಿಯಾಂಕಾ ಬದ್ದಿ ಇತರರಿದ್ದರು.