ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷ ತಾಯಿ ಸ್ಥಾನದಲ್ಲಿದೆ. ಕಾರ್ಯಕರ್ತರೇ ಮುಂದೆ ನಿಂತು ನಿಮ್ಮದೇ ಕಾರ್ಯಕ್ರಮವೆಂದುಕೊಂಡು ಎಲ್ಲರನ್ನೂ ವಸತಿ ಸಮುಚ್ಛಯ ಉದ್ಘಾಟನಾ ಕಾರ್ಯಕ್ರಮಕ್ಕೆ ಜ. 29ರಂದು ಕರೆತರಬೇಕು ಎಂದು ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್. ಜಮೀರ್ (Zameer) ಅಹ್ಮದ್ ಖಾನ್ ವಿನಂತಿಸಿದರು.
ಇಲ್ಲಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಿದ್ದ ವಸತಿ ಸಮುಚ್ಛಯ ಉದ್ಘಾಟನಾ ಸಮಾರಂಭ ಮುಂಚಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರವಿದ್ದಾಗ ಬಡವರಿಗೆ ಮನೆ ಕೊಡಲಿಲ್ಲ. ನಾನೇ ಸವಾಲು ಹಾಕಿದರೂ ಅದಕ್ಕೆ ಉತ್ತರ ಕೊಡಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಡವರಿಗೆ ಸೂರು ಕೊಟ್ಟಿದ್ದಾರೆ. ಇದು ಗ್ಯಾರಂಟಿ ಕಾರ್ಯಕ್ರಮದಲ್ಲಿ ಇಲ್ಲದೇ ಇದ್ದರೂ ಇದೂ ಒಂದು ಗ್ಯಾರಂಟಿ ಯೋಜನೆಯಾಗಿದೆ ಎಂದರು.
ಇಂಥ ಕಾರ್ಯಕ್ರಮಕ್ಕೆ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯಿಂದ ಮುಖಂಡರು, ಕಾರ್ಯಕರ್ತರು, ಫಲಾನುಭವಿಗಳು ಆಗಮಿಸಬೇಕು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇದಕ್ಕೆ ತಕ್ಕುದಾದ ಎಲ್ಲ ವ್ಯವಸ್ಥೆಯನ್ನೂ ನಾನೇ ಮುಂದೆ ನಿಂತು ಮಾಡುವೆ ಎಂದರು.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಮಾತನಾಡಿ, ವಾರ್ಡ್‌ಗಳು, ಗ್ರಾಪಂ, ತಾಲೂಕು ಸೇರಿದಂತೆ ಇತರೆಡೆ ವಾಹನಗಳನ್ನು ಕಳುಹಿಸಿಕೊಡಲಾಗುವುದು. ವಾಹನಗಳು ಸಿಗುವುದು ದುಸ್ತರವಾಗಿದ್ದರೂ ಇದಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕು ಎಂದು ಹೇಳಿದರು.
ರಾಜ್ಯ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಇಡೀ ರಾಜ್ಯದಲ್ಲಿಯೇ ವಿಶೇಷವಾಗಿ ಮನೆಗಳನ್ನು ನಿರ್ಮಿಸಲಾಗಿದೆ. ರಾಜ್ಯಾದ್ಯಂತ ನಿರ್ಮಿಸಿರುವ ಮನೆಗಳನ್ನು ನನ್ನ ಕ್ಷೇತ್ರದಿಂದಲೇ ಉದ್ಘಾಟನೆ ಆಗುತ್ತಿರುವುದು ಖುಷಿಯ ವಿಚಾರ. ಈ ಕಾರ್ಯಕ್ರಮದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಬೇಕು ಎಂದು ವಿನಂತಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ, ವಿಧಾನಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಎಂಎಲ್‌ಸಿ ಎಫ್.ಎಚ್. ಜಕ್ಕಪ್ಪನವರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಇತರರು ಅಭಿಪ್ರಾಯಗಳನ್ನು ಹಂಚಿಕೊಂಡರು.
ಹು-ಧಾ ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಅಧ್ಯಕ್ಷತೆ ವಹಿಸಿದ್ದರು.
ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಾಜಿ ಸಂಸದ ಪ್ರೊ.ಐ.ಜಿ. ಸನದಿ, ಹೆಸ್ಕಾಂ ಅಧ್ಯಕ್ಷ ಅಜೀಂಪೀರ ಖಾದ್ರಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಪ್ರಮುಖರಾದ ನಾಗರಾಜ ಗೌರಿ, ಮೋಹನ ಹಿರೇಮನಿ, ರಾಜಶೇಖರ ಮೆಣಸಿನಕಾಯಿ, ದೀಪಕ ಚಿಂಚೋರೆ, ಇತರರು ಇದ್ದರು.