ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಯವರು ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ನೀಡುವ ಭರವಸೆ ನೀಡಿರುವುದರಿಂದ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಕಣದಿಂದ ಹಿಂದೆ ಸರಿದಿರುವೆ ಎಂದು ಕಾಂಗ್ರೆಸ್ ಮುಖಂಡ ಆರ್.ಎಂ. ಕುಬೇರಪ್ಪ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪದವೀಧರರು, ನೌಕರರು ಹಾಗೂ ಶಿಕ್ಷಕರಿಗೆ ಸಾಕಷ್ಟು ಅನುಕೂಲ ಒದಗಿಸಿಕೊಟ್ಟಿದೆ. ಈಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದು, ಪದವೀಧರರಿಗೆ ಇನ್ನಷ್ಟು ಸೌಲಭ್ಯ ಕೊಡಲು ಯೋಜನೆ ರೂಪಿಸಿದೆ ಎಂದರು.
ಅತಿಥಿ ಉಪನ್ಯಾಸಕರ ವೇತನವನ್ನು 42 ಸಾವಿರ ರೂ.ಗಳಿಗೆ ಏರಿಸಿದ್ದ ಕಾಂಗ್ರೆಸ್ ಸರ್ಕಾರ, ಹೆರಿಗೆ ರಜೆ, ವೈದ್ಯಕೀಯ ಸೌಲಭ್ಯ ಸೇರಿ ಇನ್ನಿತರ ಸೌಕರ್ಯ ಒದಗಿಸಿದೆ. ನಿವೃತ್ತಿ ನಂತರ ಅವರಿಗೆ 5 ಲಕ್ಷ ರೂ.ಗಳ ಇಡಿಗಂಟು ಸಹ ನೀಡಲಾಗುತ್ತಿದೆ. ಒಪಿಎಸ್ ರದ್ದು ಪಡಿಸಿ, ಹಳೇಯ ಪಿಂಚಣಿ ಜಾರಿಗೊಳಿಸುವ ಭರವಸೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.
ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಕುಬೇರಪ್ಪ ಹಾಗೂ ಬಸವರಾಜ ಗುರಿಕಾರ ಅವರು ಬೆಂಬಲ ನೀಡಿರುವುದರಿಂದ ಆನೆಬಲ ಬಂದಂತಾಗಿದೆ. ಈಗಾಗಲೇ ಮೂರ್ನಾಲ್ಕು ಸುತ್ತು ಪ್ರಚಾರ ನಡೆಸಿರುವೆ.
ಕಳೆದ ಬಾರಿಯ ಚುನಾವಣೆಯಲ್ಲಿ 8,700 ಮತಗಳು ಕುಲಗೆಟ್ಟಿದ್ದವು. ಮತಪತ್ರದಲ್ಲಿ ಕೆಲವರು ಅಭ್ಯರ್ಥಿಯ ಹೆಸರಿನ ಎದುರು ಟಿಕ್ ಹಾಕಿದ್ದರೆ, ಇನ್ನೂ ಕೆಲವರು ಕನ್ನಡದ ಅಂಕಿ ಬರೆದಿದ್ದರು. ಮತದಾರರು ತಾವು ಮತ ನೀಡುವ ವ್ಯಕ್ತಿಯ ಹೆಸರಿನ ಮುಂದೆ ಇಂಗ್ಲಿಷ್ ಅಕ್ಷರದ 1 ಬರೆಯಬೇಕು. ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮಾತ್ರ ಮತದಾನದ ಸಮಯ ಇರುತ್ತದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಒಟ್ಟು 97,398 ಮತದಾರರು ಇದ್ದು, 137 ಮತಗಟ್ಟೆಗಳು ಇವೆ. ಧಾರವಾಡ ಜಿಲ್ಲೆಯಲ್ಲಿ 35,117, ಗದಗ ಜಿಲ್ಲೆಯಲ್ಲಿ 21,594, ಹಾವೇರಿ ಜಿಲ್ಲೆಯಲ್ಲಿ 24,648 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 16,039 ಮತದಾರರು ಇದ್ದಾರೆ ಎಂದು ವಿವರಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಶ್ರೀಧರ ರಡ್ಡೇರ ಸುದ್ದಿಗೋಷ್ಠಿಯಲ್ಲಿ ಇದ್ದರು.