ಈ ಕುರಿತು ಸದನದಲ್ಲಿ ಮಾತನಾಡಿರುವ ಅವರು, ಕಲ್ಯಾಣ ಕರ್ನಾಟಕದ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಮತ್ತು ಬಜೆಟ್ನಲ್ಲಿ ಅಭಿವೃದ್ಧಿಗೆ 2 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದು ಆಗ್ರಹಿಸಿದರು.
ಸಕ್ಕರೆ ನಿರ್ದೇಶನಾಲಯ, ಉಪ ಲೋಕಾಯುಕ್ತ ಕಚೇರಿ, ಮಾಹಿತಿ ಹಕ್ಕು ಆಯುಕ್ತರ ಕಚೇರಿ ಸೇರಿದಂತೆ ಸುಮಾರು 9 ಕಚೇರಿಗಳನ್ನು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವುದಾಗಿ ಸರ್ಕಾರ ಹೇಳಿತ್ತು.
ಆದರೆ, ಇದುವರೆಗೆ ಒಂದೇ ಒಂದು ಕುರ್ಚಿ,ಟೇಬಲ್ ಸಹ ಇಲ್ಲಿಗೆ ಬಂದಿಲ್ಲ. ಇದು ಈ ಭಾಗದ ಜನರಿಗೆ ಮಾಡುತ್ತಿರುವ ಮೋಸವಲ್ಲವೇ ? ಎಂದು ಸರ್ಕಾರವನ್ನು ಪ್ರಶ್ನಿಸಿದರು.
ಬೆಂಗಳೂರು ನಗರಕ್ಕೆ ಒಬ್ಬರು ಉಸ್ತುವಾರಿ ಸಚಿವರು ಇರುವಂತೆ, ಹುಬ್ಬಳ್ಳಿ-ಧಾರವಾಡ ಅವಳಿ ನಗರಕ್ಕೂ ಒಬ್ಬರು ಪ್ರತ್ಯೇಕ ಉಸ್ತುವಾರಿ ಸಚಿವರನ್ನು ನೇಮಿಸಬೇಕು.
ಆಗ ಮಾತ್ರ ಇಲ್ಲಿನ ಆಡಳಿತಕ್ಕೆ ವೇಗ ನೀಡಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡದ ಮುಮ್ಮಿಗಟ್ಟಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ಗೆ ನೀಡಲಿರುವ ಭೂಮಿಯ ದರ ಕಡಿಮೆ ಮಾಡಬೇಕು.
ಹುಬ್ಬಳ್ಳಿಯಲ್ಲಿ ಐಟಿ ಪಾರ್ಕ್ ಮತ್ತು ಕಂಪನಿಗಳನ್ನು ಸ್ಥಾಪಿಸಲು ವಿಶೇಷ ರಿಯಾಯಿತಿ ನೀಡಬೇಕು. ಎಂಎಸ್ಎಂಇಗಳನ್ನು ಉತ್ತೇಜಿಸಲು ಹುಬ್ಬಳ್ಳಿಯಲ್ಲಿ 5 ರಿಂದ 10 ಎಕರೆಯಲ್ಲಿ ಶಾಶ್ವತ ಪ್ರದರ್ಶನ ಕೇಂದ್ರ ಸ್ಥಾಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಡಾ. ಗಂಗೂಬಾಯಿ ಹಾನಗಲ್ ಹೆಸರಿನ ಗುರುಕುಲವನ್ನು ಹುಬ್ಬಳ್ಳಿಯಲ್ಲಿಯೆ ಉಳಿಸಿಕೊಂಡು, ಹೆಚ್ಚಿನ ಅನುದಾನ ನೀಡಬೇಕು.
ಹುಬ್ಬಳ್ಳಿಯ ನೃಪತುಂಗ ಬೆಟ್ಟ, ಉಣಕಲ್ಲ ಕೆರೆ, ಸಿದ್ಧಾರೂಢ ಮಠ ಮತ್ತು ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು ಎಂದು ಆಗ್ರಹಿಸಿದರು.
ತುಪ್ಪರಿಹಳ್ಳದ 312 ಕೋಟಿ ರೂ. ವೆಚ್ಚದ ಯೋಜನೆಯನ್ನು ತ್ವರಿತಗೊಳಿಸಬೇಕು ಹಾಗೂ ಬೆಣ್ಣಿಹಳ್ಳದ 1,300 ಕೋಟಿ ರೂ. ಯೋಜನೆಗೆ ತಕ್ಷಣ ಸಂಪುಟದ ಅನುಮೋದನೆ ನೀಡುವಂತೆ ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.
ಉತ್ತರ ಕರ್ನಾಟಕಕ್ಕೆ ಅನುಕೂಲವಾಗುವಂತೆ ಹುಬ್ಬಳ್ಳಿಯಲ್ಲಿ ಸುಸಜ್ಜಿತವಾದ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ಸ್ಥಾಪಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.