

ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿ :
walkathon ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಹಾಗೂ ಎಸ್ಜಿಎಂ ನೇತ್ರ ಬ್ಯಾಂಕ್ನಿಂದ 41ನೇ ರಾಷ್ಟ್ರೀಯ ನೇತ್ರದಾನ ಸಪ್ತಾಹ ಹಾಗೂ ವಾಕಥಾನ್ ಅನ್ನು ಆ. 25ರಂದು ಬೆಳಗ್ಗೆ 9.30ಕ್ಕೆ ಕೆಎಂಸಿಆರ್ಐ ಆಸ್ಪತ್ರೆ ಮುಂಭಾಗದಿಂದ ಆಯೋಜಿಸಲಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ನೇತ್ರ ತಜ್ಞ ಡಾ. ಕೃಷ್ಣ ಪ್ರಸಾದ, ಕೆಎಂಸಿಆರ್ಐ ಮುಂಭಾಗದಿಂದ ಹೊಸೂರು ವೃತ್ತ ಮಾರ್ಗವಾಗಿ ಆಸ್ಪತ್ರೆಯವರೆಗೆ ವಾಕಥಾನ್ ನಡೆಯಲಿದೆ ಎಂದರು.
ಕಾರ್ನಿಯಲ್ ಅಂಧತ್ವದ ವಿರುದ್ಧ ಜಾಗೃತಿ ಮೂಡಿಸುವುದಕ್ಕಾಗಿ ವಾಕಥಾನ್ ಆಯೋಜಿಸಲಾಗಿದೆ. ಸಾವಿಗೀಡಾದ ವ್ಯಕ್ತಿಯನ್ನು ದಹನ ಮಾಡಿದರೆ ಎರಡು ಕಾರ್ನಿಯಲ್ (ಕಣ್ಣಿನ ಕಪ್ಪು ಗುಡ್ಡೆ) ಸುಟ್ಟು ಹೋಗುತ್ತವೆ. ಆದರೆ, ಮರಣ ಹೊಂದಿರುವ ವ್ಯಕ್ತಿಯ ಕಾರ್ನಿಯಲ್ ದಾನ ಮಾಡಿದರೆ ಇಬ್ಬರು ಅಂಧರಿಗೆ ದೃಷ್ಟಿ ಬರುತ್ತದೆ ಎಂದರು.
ಪ್ರತಿ ವರ್ಷ ಭಾರತದಲ್ಲಿ ಅಂದಾಜು 70 ಲಕ್ಷ ಜನ ಸಾವಿಗೀಡಾಗುತ್ತಾರೆ. ಪ್ರತಿ ವರ್ಷ ಸುಮಾರು 40 ಸಾವಿರ ಮಾತ್ರ ದಾನದ ರೂಪದಲ್ಲಿ ಕಾರ್ನಿಯಾ ಸಿಗುತ್ತಿವೆ. ಉಳಿದವು ದಹನವಾಗುತ್ತಿವೆ ಎಂದು ಖೇದ ವ್ಯಕ್ತಪಡಿಸಿದರು.
ದೇಶದಲ್ಲಿ ಸುಮಾರು 30 ಲಕ್ಷ ಅಂಧರು ಇದ್ದಾರೆ. ಪ್ರತಿ ವರ್ಷ ಅಂದಾಜು 50 ಸಾವಿರ ಅಂಧರು ಹೆಚ್ಚುತ್ತಿದ್ದಾರೆ. ಸಾವಿಗೀಡಾದ ವ್ಯಕ್ತಿಯ ಕುಟುಂಬದವರು, ಸ್ನೇಹಿತರು ಐ ಬ್ಯಾಂಕ್ಗೆ ಕರೆ ಮಾಡಿದರೆ, ಕೆಲವೇ ನಿಮಿಷಗಳಲ್ಲಿ ಕಾರ್ನಿಯಾ ಪಡೆದುಕೊಳ್ಳಬಹುದು ಎಂದರು.
ವಾಕಥಾನ್ ನಂತರ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆಯಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಕಾರ್ನಿಯಾ ದಾನ ಪಡೆದ ವ್ಯಕ್ತಿ ಹಾಗೂ ಆತನ ಕುಟುಂಬದವರು, ದಾನ ಮಾಡಿದ ವ್ಯಕ್ತಿಯ ಕುಟುಂಬದವರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಇನ್ಫೋಸಿಸ್ ಫೌಂಡೇಷನ್ನ ಯೋಜನೆಯಾದ ಸಾರ್ವತ್ರಿಕ ಕಾರ್ನಿಯಾ ಆರೈಕೆ ಅಭಿಯಾನಕ್ಕೆ ಎಂ.ಎಂ. ಜೋಶಿ ಆಸ್ಪತ್ರೆಯೂ ಆಯ್ಕೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಡಾ. ಮನೋಹರ, ಡಾ. ಅನಿಕೇತ ಶಾಸ್ತ್ರಿ ಸುದ್ದಿಗೋಷ್ಠಿಯಲ್ಲಿ ಇದ್ದರು.