(vishwanath sajjanar) ಜನ್ಮಭೂಮಿ ಸಂಸ್ಕಾರ ಕರ್ಮಭೂಮಿಯಲ್ಲಿ ಫಲ

 ವಿಶ್ವನಾಥ ಸಜ್ಜನರ  (vishwanath sajjanar) ಗೆಳೆಯರ ಬಳಗದಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ಮಾತನಾಡಿದರು.
ವಿಶ್ವನಾಥ ಸಜ್ಜನರ (vishwanath sajjanar) ಗೆಳೆಯರ ಬಳಗದಿಂದ ಹುಬ್ಬಳ್ಳಿಯಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ ಮಾತನಾಡಿದರು.
Published on
ಹುಬ್ಬಳ್ಳಿ: ಜನ್ಮಭೂಮಿ ಹುಬ್ಬಳ್ಳಿಯಲ್ಲಿ ನನಗೆ ಸಿಕ್ಕ ಸಂಸ್ಕಾರವು ಕರ್ಮಭೂಮಿಯಾದ ಹೈದರಾಬಾದ್‌ನಲ್ಲಿ ಫಲ ನೀಡಿದೆ. ಇದಕ್ಕೆ ತಂದೆ-ತಾಯಿ, ಹಿರಿಯರು ಹಾಗೂ ಗೆಳೆಯರ ಬಳಗದ ಹಾರೈಕೆಯೇ ನನ್ನ ಬೆಳವಣಿಗೆಗೆ ಮೂಲ ಕಾರಣ ಎಂದು ಹೈದರಾಬಾದ್ ನಗರ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ (vishwanath sajjanar) ಅಭಿಪ್ರಾಯಪಟ್ಟರು.
ಶ್ರೀ ವಿಶ್ವನಾಥ ಸಜ್ಜನರ ಗೆಳೆಯರ ಬಳಗದಿಂದ ಇಲ್ಲಿಯ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹುಬ್ಬಳ್ಳಿಯವನು ನಾನು ಎನ್ನಲು ನನಗೆ ಹೆಮ್ಮೆ ಇದೆ. ಗಂಡುಮೆಟ್ಟಿನ ನಾಡಿನಿಂದ ಹೋಗಿ ಹೆಸರು ಮಾಡಲು ತಮ್ಮೆಲ್ಲರ ಆಶೀರ್ವಾದವೇ ಕಾರಣ ಎಂದರಲ್ಲದೇ ತಮ್ಮ ತಂದೆಯನ್ನು ಸ್ಮರಿಸಿ ಕೆಲಹೊತ್ತು ಮೌನಿಯಾದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತೆಗೆ ಸಂಬಂಧಿಸಿದಂತೆ ಹಲವಾರು ಬಾರಿ ವಿಶ್ವನಾಥ ಸಜ್ಜನರ ಅವರು ಮಾಹಿತಿ ನೀಡಿದ್ದರು. ಅದನ್ನು ಕೇಂದ್ರ ಗೃಹ ಸಚಿವ ಅಮಿತ್‌ಶಾ ಅವರಿಗೂ ಕೊಟ್ಟಿದ್ದೆ. ತಮ್ಮ ಕೆಲಸದ ಮಧ್ಯೆಯೂ ದೇಶದ ಹಿತ ಬಯಸುತ್ತಿರುವ ವಿಶ್ವನಾಥ ಸಜ್ಜನರ ಅವರ ಅನುಭವವನ್ನು ಕೇಂದ್ರ ಸರ್ಕಾರವು ಯಾವಾಗಲೂ ಪಡೆಯಲು ಇಚ್ಛಿಸುತ್ತದೆ ಎಂದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದರು.
ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ರಾಜ್ಯ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ, ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ವಿಶ್ವನಾಥ ಸಜ್ಜನರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು.
ಗೆಳೆಯರ ಬಳಗದ ಅಧ್ಯಕ್ಷ ಚನ್ನವೀರ ಮುಂಗರವಾಡಿ ಪ್ರಾಸ್ತಾವಿಕವಾಗಿ ಮಾತನಾಡಿ, ತಮ್ಮ ಗೆಳೆಯನ ಸಾಧನೆಯನ್ನು ಸಾದರಪಡಿಸಿದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಸಹಿತ ಬಹಳಷ್ಟು ಜನರು, ವಿಶ್ವನಾಥ ಸಜ್ಜನರ ಹಾಗೂ ಪತ್ನಿ ಅನೂಪ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಇದಕ್ಕೂ ಮೊದಲು ಬಿವಿಬಿ ಕಾಲೇಜ್ ಆವರಣದಿಂದ ಕಾರ್ಯಕ್ರಮ ಸ್ಥಳಕ್ಕೆ ತೆರೆದ ವಾಹನದಲ್ಲಿ ವಿಶ್ವನಾಥ ಸಜ್ಜನರ ದಂಪತಿಯನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಎಂಎಲ್‌ಸಿ ಪ್ರದೀಪ ಸೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಾಲಿಕೆ ಹಿರಿಯ ಸದಸ್ಯ ರಾಜಣ್ಣ ಕೊರವಿ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಚಂದನ ಪೈ, ಮಹೇಂದ್ರ ದಲಬಂಜನ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net