(vijayendra) ರಾಜಕೀಯ ದಿಕ್ಕು ಬದಲಿಸಲಿದೆ ಉಪ ಚುನಾವಣೆ

 ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (vijayendra)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (vijayendra)
Published on
ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಉಪ ಚುನಾವಣೆಗಳಲ್ಲಿ ಅಧಿಕಾರ ದುರ್ಬಳಕೆ ಮಾಡಿದರೂ ಫಲ ನೀಡಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸುವುದು ನಿಶ್ಚಿತ. ಈ ಗೆಲುವು ರಾಜ್ಯ ಸರ್ಕಾರದ ದಿಕ್ಕು ಬದಲಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (vijayendra) ಭವಿಷ್ಯ ನುಡಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಸುವ ವೇಳೆ ನಾನಿದ್ದೆ. ಕಾರ್ಯಕರ್ತರ ಉತ್ಸಾಹ, ಮತದಾರರ ಒಲವು ಬಿಜೆಪಿ ಪರ ಇದೆ. ಭಾನುವಾರ ಬೆಳಗ್ಗೆ 7ರಿಂದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಪಕ್ಷದ ಪ್ರಮುಖರ ಸಭೆ ಕರೆದಿದ್ದೆ. ಹಿಂದುಳಿದ ಸಮುದಾಯಗಳ ಪ್ರಮುಖರನ್ನು ಪ್ರತ್ಯೇಕ ಭೇಟಿ ಮಾಡಿದ್ದೇನೆ. ಮತದಾರರ ಒಲವು ಬಿಜೆಪಿ ಅಭ್ಯರ್ಥಿ ಪರ ಇದೆ. ಸಾಮಾನ್ಯ ಕಾರ್ಯಕರ್ತರನ್ನು ಅಭ್ಯರ್ಥಿ ಮಾಡಲಾಗಿದೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಬೇರೆ ಬೇರೆ ಕಾರಣಗಳಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ತೀರ್ಮಾನಕ್ಕೆ ಮತದಾರರು ಬಂದಿದ್ದಾರೆ. ಎರಡೂ ಕ್ಷೇತ್ರದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ಬೇಸತ್ತಿದ್ದಾರೆ. ತಕ್ಕ ಪಾಠ ಕಲಿಸುವ ಮನಸ್ಥಿತಿಯಲ್ಲಿ ಮತದಾರರು ಇದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಬೀಡು ಬಿಟ್ಟಿದ್ದಾರೆ. ಕಾರಣವಿಷ್ಟೇ, ಬಾಗಲಕೋಟೆ ಮತ್ತು ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋಲುವ ಮುನ್ಸೂಚನೆ ಸಿಕ್ಕಿದೆ. ಸೋತರೆ ತಮ್ಮ ರಾಜಕೀಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿಯೇ ಈ ಉಪ ಚುನಾವಣೆ ರಾಜಕೀಯ ದಿಕ್ಕು ಬದಲಿಸುವ ಶಕ್ತಿಯಾಗಿದೆ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದರು.
ಶಿಕ್ಷಣದ ವಿಷಯದಲ್ಲಿ ರಾಜ್ಯ ಸರ್ಕಾರ ಮೂರ್ಖರಂತೆ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಷ್ಟ್ರೀಯ ಶಿಕ್ಷಣ ನೀತಿ ಧಿಕ್ಕರಿಸಿದರು. ಹೊಸ ಶಿಕ್ಷಣ ನೀತಿ ತರುತ್ತೇವೆ ಎಂದರು. ಮೂರು ವರ್ಷ ಕಳೆದರೂ ತಮ್ಮದೇ ಆದ ಶಿಕ್ಷಣ ನೀತಿ ತರಲಾಗುತ್ತಿಲ್ಲ. ತಾವೇ ನೇಮಕ ಮಾಡಿದ್ದ ಸಮಿತಿ ರಚಿಸಿ ವರದಿ ಕೊಟ್ಟರೂ ಉಪ ಸಮಿತಿ ರಚಿಸಿದ್ದಾರೆ. ರಾಜ್ಯದ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತೆ ಮಾಡಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಇತ್ತು. ಕೇಂದ್ರ ಸರ್ಕಾರದ ವಿರುದ್ಧದ ಧೋರಣೆಯಿಂದಾಗಿ ಹಿಂದಿ ಭಾಷೆಯನ್ನು ಸೂತ್ರದಿಂದ ಕೈಬಿಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಸಹಿಸದೇ ಈಗ ಹಿಂದಿ ಭಾಷೆ ಬೇಡ ಎನ್ನಬೇಕಿತ್ತೆ? ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಎಲ್ಲರನ್ನೂ ಮರೆತು ಅಧಿಕಾರದ ಅಮಲಿನಲ್ಲಿ ತೇಲುತ್ತಿದ್ದಾರೆ ಎಂದರಲ್ಲದೆ, ಪಶ್ಚಿಮ ಬಂಗಾಳ, ಅಸ್ಸಾಂ ಸೇರಿ ಇತರೆಡೆ ಚುನಾವಣೆಗಳು ಇರುವುದರಿಂದ ರಾಷ್ಟ್ರ ನಾಯಕರು ಅಲ್ಲಿ ಬೀಡುಬಿಟ್ಟಿದ್ದಾರೆ. ರಾಜ್ಯದ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಜಗದೀಶ ಶೆಟ್ಟರ್ ಸೇರಿದಂತೆ ಇತರ ಹಿರಿಯ ನಾಯಕರು ಪ್ರಚಾರ ನಡೆಸಲಿದ್ದಾರೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net