ಹುಬ್ಬಳ್ಳಿ: vegg rate ಕೆಲ ದಿನಗಳ ಹಿಂದೆ ತಪ್ಪಲು ಪಲ್ಯ ಅಥವಾ ಸೊಪ್ಪು ಬೆಲೆ ಹೆಚ್ಚಳದಿಂದಾಗಿ ಖರೀದಿಸಲು ಸುಸ್ತಾಗುತ್ತಿದ್ದ ಗ್ರಾಹಕರು ಈಗ ಸಸ್ತಾ ಆಗಿರುವುದಕ್ಕೆ ಖುಷಿಯಾಗಿದ್ದಾರೆ.
ಒಂದು ಕಟ್ಟು (ಸಿವುಡು) ಕೊತ್ತಂಬರಿ, ಮೆಂತೆ ಯಾವುದೇ ತಪ್ಪಲು ಪಲ್ಯಕ್ಕೆ ಮೊದಲು 10, 15 ರೂ. ಕೊಡಬೇಕಾಗಿತ್ತು. ಈಗ ಮುಕ್ತ ಮಾರುಕಟ್ಟೆಯಲ್ಲಿ 4, 5 ರೂ.ಗೆ ಖರೀದಿಸಬಹುದು. ಹಾಗಾಗಿ ಗ್ರಾಹಕರು ಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬಹುದಾಗಿದೆ.
ಮುಂಗಾರಿನಲ್ಲಿ ಸ್ಥಳಿಯರು ತರಕಾರಿ ಅಥವಾ ಸೊಪ್ಪು ಪಲ್ಯವನ್ನು ಬೆಳೆಯುವುದು ಕಡಿಮೆ. ಆಗೆಲ್ಲ ಹೊರಗಿನ ಜಿಲ್ಲೆಗಳಿಂದಲೇ ಹೆಚ್ಚು ತಪ್ಪಲು ಪಲ್ಯ ಬರುತ್ತಿತ್ತು.
ಹಿಂಗಾರು ಸೀಸನ್ ಆರಂಭವಾಗುತ್ತಿದ್ದಂತೆ ಹೆಚ್ಚಿನ ರೈತರು ತರಕಾರಿಯತ್ತ ಹೊರಳಿದ್ದಾರೆ. ಇದಕ್ಕೆ ಕಾರಣವೂ ಇದೆ. ಮಳೆಗಾಲದಲ್ಲಿ ಹೆಚ್ಚು ಕೂಲಿಕಾರ್ಮಿಕರನ್ನು ತರಕಾರಿ ಬೇಸಾಯ ಬಯಸುತ್ತದೆ. ಈಗ ಮಳೆ ಇಲ್ಲದಿರುವುದರಿಂದ ಮನೆಯ ಸದಸ್ಯರೇ ಸೇರಿಕೊಂಡು ತರಕಾರಿ ಬೆಳೆದು ಲಾಭ ಗಳಿಸಲು ಸಾಧ್ಯವಿದೆ. ಹಾಗಾಗಿ ಎಕರೆ, ಎರಡು, ಮೂರು ಎಕರೆ ಇರುವವರು, ಒಂದಿಷ್ಟು ನೀರಾವರಿ ಸವಲತ್ತು ಇರುವವರು ತರಕಾರಿ ಬೆಳೆಯಲು ಮುಂದಾಗಿದ್ದಾರೆ.
ಪಾರಂಪರಿಕವಾಗಿ ತರಕಾರಿ, ಸೊಪ್ಪು ಬೆಳೆಯುವವರಲ್ಲದೇ ಇತರ ರೈತರು ಸಹ ಬೆಳೆಯುತ್ತಿದ್ದಾರೆ. ಹಾಗಾಗಿ ಹುಬ್ಬಳ್ಳಿ ಎಪಿಎಂಸಿಗೆ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗುತ್ತಿದೆ. ಸಾಮಾನ್ಯ ದಿನಗಳಲ್ಲಿ 30ರಿಂದ 40 ಸಾವಿರ ಕಟ್ಟು ಬರುತ್ತಿದ್ದ ಸೊಪ್ಪು ಈಗ 50 ಸಾವಿರ ಕಟ್ಟುಗಳಷ್ಟು ಬರುತ್ತಿದೆ.
ಧಾರವಾಡ ಜಿಲ್ಲೆಯ ಕಲಘಟಗಿ, ಧಾರವಾಡ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಭಾಗದಲ್ಲಿ ತರಕಾರಿ ಹಾಗೂ ಸೊಪ್ಪು ಬೆಳೆಯಲಾಗುತ್ತದೆ. ದರ ಕುಸಿತವು ತಮಗೆ ಲಾಭ ತರುತ್ತಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ.
"
ಕೆಲ ದಿನಗಳಿಂದ ತಪ್ಪಲು ಪಲ್ಯ ಹೆಚ್ಚು ಬರುತ್ತಿದೆ. ಸ್ಥಳಿಯವಾಗಿ ಅಧಿಕ ರೈತರು ತರಕಾರಿ ಬೆಳೆಯುತ್ತಿರುವುದರಿಂದ ಆವಕ ಜಾಸ್ತಿಯಾಗಿದೆ. ಹಾಗಾಗಿ ಸೊಪ್ಪು ದರ ಕಡಿಮೆಯಾಗಿದೆ. ಸಗಟು ಮಾರುಕಟ್ಟೆಯಲ್ಲಿ ಒಂದು ಕಟ್ಟು ಹೆಚ್ಚೆಂದರೆ 2 ರೂ.ಗೆ ಮಾರಾಟ ಆಗುತ್ತಿದೆ.