ಸಾಮಾನ್ಯ ರೈಲ್ವೆ ಪ್ರಯಾಣಿಕರಿಗೆ ವಂದೇ ಭಾರತ್ ಹೊರೆ

ಜೇಬಿಗೆ ಹೊರೆ | ಜನಶತಾಬ್ದಿಗೆ ಹೋಲಿಸಿದರೆ ಕೇವಲ ಅರ್ಧ ತಾಸಿನ ವ್ಯತ್ಯಾಸ
ವಂದೇ ಭಾರತ್ ರೈಲು
ವಂದೇ ಭಾರತ್ ರೈಲು
Published on: 

ಹುಬ್ಬಳ್ಳಿ : ವಂದೇ ಭಾರತ್ ರೈಲಿಗೆ ದೇಶದಾದ್ಯಂತ ಬೇಡಿಕೆಯೇನೋ ಹೆಚ್ಚುತ್ತಿದೆ. ಆದರೆ, ಈ ರೈಲುಗಳ ಹೆಚ್ಚಿನ ದರದಿಂದಾಗಿ ಸಾಮಾನ್ಯ ಪ್ರಯಾಣಿಕರು ಪ್ರಯಾಣಿಸದಂತಾಗಿದೆ. ಹೀಗಾಗಿ, ಜನಸಾಮಾನ್ಯರಿಗೆ ಅನುಕೂಲವಾಗಿರುವ ಜನಶತಾಬ್ದಿ ರೈಲುಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಹಳಿಗೆ ಇಳಿಸಬೇಕೆಂಬ ಕೂಗು ಕೇಳಿಬರುತ್ತಿದೆ.

ಹೊಸ ವೇಗ ಹಾಗೂ ಆಧುನಿಕ ರೂಪದೊಂದಿಗೆ ಸಂಚರಿಸುತ್ತಿರುವ ವಂದೇ ಭಾರತ್ ರೈಲುಗಳು ಸಾಮಾನ್ಯ ಪ್ರಯಾಣಿಕರಿಗೆ ದುಬಾರಿಯಾಗಿವೆ. ಅದೂ ಅಲ್ಲದೇ, ಜನಶತಾಬ್ದಿ ರೈಲುಗಳಿಗೆ ಹೋಲಿಸಿದರೆ, ಈ ಹೊಸ ರೈಲುಗಳ ವೇಗದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣಿಸುವುದಿಲ್ಲ.

ಉದಾಹರಣೆಗೆ, ಹುಬ್ಬಳ್ಳಿ-ಬೆಂಗಳೂರು ಮಧ್ಯದ ಅಂದಾಜು 490 ಕಿಮೀ ದೂರವನ್ನು ವಂದೇ ಭಾರತ್ ರೈಲು 6 ತಾಸು 30 ನಿಮಿಷಗಳಲ್ಲಿ ಕ್ರಮಿಸುತ್ತದೆ. ಅದೇ, ಹುಬ್ಬಳ್ಳಿಯಿಂದ ಹೊರಡುವ ಜನಶತಾಬ್ದಿ ರೈಲು 7 ತಾಸಿನಲ್ಲಿ ಬೆಂಗಳೂರು ತಲುಪುತ್ತದೆ. ಸುಮಾರು ಅರ್ಧ ತಾಸಿನ ವ್ಯತ್ಯಾಸಗಳಲ್ಲಿ ಎರಡೂ ರೈಲು ನಿಗದಿತ ನಿಲ್ದಾಣ ತಲುಪುತ್ತವೆ.

ಜನಶತಾಬ್ದಿ ರೈಲಿನ ಚೇರ್​ಕಾರ್ ದರ ಸುಮಾರು 720 ರೂ. ಇದ್ದು, ವಂದೇ ಭಾರತ್ ರೈಲಿನ ಚೇರ್​ಕಾರ್ ದರ ಸುಮಾರು 1,330 ರೂ. ಇದೆ. ಜನಸಾಮಾನ್ಯರು ಕುಟುಂಬ ಸಮೇತರಾಗಿ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ಅವರಿಗೆ ಹೆಚ್ಚಿನ ಹೊರೆ ಆಗುವುದು ಖಚಿತ.

ರೈಲ್ವೆ ಇಲಾಖೆ ಮೂಲಗಳ ಪ್ರಕಾರ ಕಳೆದ ಹಲವಾರು ವರ್ಷಗಳಿಂದ ಹೊಸ ಜನಶತಾಬ್ದಿ ರೈಲುಗಳನ್ನು ಹಳಿಗೆ ಇಳಿಸಿಯೇ ಇಲ್ಲ. ಸಚಿವಾಲಯದ ಹೆಚ್ಚಿನ ಗಮನ ವಂದೇ ಭಾರತ್ ರೈಲುಗಳನ್ನು ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪರಿಚಯಿಸುವುದರಲ್ಲಿಯೇ ಇದೆ.

ನಿಗದಿತ ವರ್ಗದ ಜನರನ್ನು ಗಮನದಲ್ಲಿಟ್ಟು ಹೆಚ್ಚಿನ ವಂದೇ ಭಾರತ್ ರೈಲುಗಳನ್ನು ಪರಿಚಯಿಸುತ್ತಿರುವ ಕೇಂದ್ರ ಸರ್ಕಾರ, ಜನಶತಾಬ್ದಿ ಸೇರಿದಂತೆ ಇನ್ನಿತರ ಹೊಸ ಸಾಮಾನ್ಯ ರೈಲುಗಳನ್ನು ಸಹ ಹೆಚ್ಚಿನ ಸಂಖ್ಯೆಯಲ್ಲಿ ಓಡಿಸಿದರೆ ಬಡ ಹಾಗೂ ಮಧ್ಯಮ ವರ್ಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬ ಸಲಹೆಗಳು ಕೇಳಿಬರುತ್ತಿವೆ.

ವಂದೇ ಭಾರತ್ ರೈಲುಗಳಲ್ಲಿ ಉತ್ತಮ ಶೌಚಾಲಯ, ಪ್ರಯಾಣಿಕರ ವಾಹಿತಿ ವ್ಯವಸ್ಥೆ ಸೇರಿದಂತೆ ಇನ್ನಿತರ ಆಧುನಿಕ ಸೌಲಭ್ಯಗಳಿದ್ದು, ಅದೇ ಸೌಲಭ್ಯಗಳನ್ನು ಸಾಮಾನ್ಯ ರೈಲುಗಳಲ್ಲಿಯು ಸಹ ಪರಿಚಯಿಸಬೇಕಾಗದ ಅಗತ್ಯವಿದೆ.

ವಂದೇ ಭಾರತ್ ರೈಲು ಪ್ರತಿ ಗಂಟೆಗೆ ಗರಿಷ್ಠ 160 ಕಿಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಇದ್ದರೂ, ವೇಗಕ್ಕೆ ತಕ್ಕಂತೆ ಸಾಮರ್ಥ್ಯ ಹೆಚ್ಚಿಸಿಕೊಳ್ಳದ ಹಳಿಗಳು, ವಿವಿಧೆಡೆ ನಿಲುಗಡೆ ಸೇರಿ ಇನ್ನಿತರ ಕಾರಣಗಳಿಂದ ಗರಿಷ್ಠ ವೇಗದಲ್ಲಿ ಸಂಚರಿಸಲು ಸಾಧ್ಯವಾಗಿಲ್ಲ.

ವಂದೇ ಭಾರತ್ ವೇಗ ಮತ್ತು ಹೆಚ್ಚಿನ ಸೌಲಭ್ಯ ಬಯಸುವವರಿಗೆ ಇರಲಿ. ಅದರ ಜತೆಗೆ ಹೊಸ ಜನಶತಾಬ್ದಿ ಅಥವಾ ವೇಗದ ಇಂಟರ್​ಸಿಟಿ ರೈಲುಗಳು ಮಧ್ಯಮ ವರ್ಗದ ಪ್ರಯಾಣಿಕರಿಗೆ ಕೈಗೆಟುಕುವ ಆಯ್ಕೆಯಾಗಲಿ ಎಂಬ ಅಭಿಪ್ರಾಯಗಳು ರೈಲ್ವೆ ಪ್ರಯಾಣಿಕರದ್ದು.

ಎಷ್ಟು ಸಂಖ್ಯೆಯ ವಂದೇ ಭಾರತ್ ರೈಲುಗಳನ್ನು ಓಡಿಸಲಾಗಿದೆ ಎಂಬ ಆಧಾರದ ಮೇಲೆ ರೈಲ್ವೆಯ ಆಧುನೀಕರಣ ಅಳೆಯದೇ, ಸಾಮಾನ್ಯ ಭಾರತೀಯರು ಎಷ್ಟು ವೇಗ, ಸುರಕ್ಷತೆ, ಆರಾಮ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬುದು ಮುಖ್ಯ.

ಹೊಸ ಹೊಸ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಸಂಚಾರ ಆರಂಭಿಸುವುದಕ್ಕಷ್ಟೇ ಗಮನ ಹರಿಸದೇ, ಪ್ರಯಾಣಿಕರಿಗೆ ಕೈಗೆಟಕುವ ದರದಲ್ಲಿ ರೈಲು ಪ್ರಯಾಣ ಸಿಗುವತ್ತಲೂ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯ ಚಿಂತಿಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net