valvex ಕೈಗಾರಿಕೆಗಳು ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲಿ
valvex ಹುಬ್ಬಳ್ಳಿಯ ಎಪಿಎಂಸಿ ಬಳಿಯ ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ವಾಲ್ವ ಎಕ್ಸ್ ಪ್ರದರ್ಶನ ಮೇಳವನ್ನು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಉದ್ಘಾಟಿಸಿದರು. ತಿಲಕ ವಿಕಂಶಿ, ಸಂಗಮೇಶ ನಿರಾಣಿ, ರುದ್ರೇಗೌಡ, ರಮೇಶ ಪಾಟೀಲ, ಶಶಿಕುಮಾರ ಎಂ, ಶಿವಾನಂದ ಆವಟಿ ಇದ್ದರು.
ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಲಹೆ
ವಾಲ್ವ ಎಕ್ಸ್ ಪ್ರದರ್ಶನ ಮೇಳ ಉದ್ಘಾಟನೆ
ಹುಬ್ಬಳ್ಳಿ: valvex ಉದ್ಯಮ ರಂಗದಲ್ಲಿ ಗುಣಮಟ್ಟದ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸುವ ಜತೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಗುರಿ ಇಟ್ಟುಕೊಳ್ಳಬೇಕು ಎಂದು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಉದ್ಯಮಿಗಳಿಗೆ ಸಲಹೆ ನೀಡಿದರು.
ಇಲ್ಲಿಯ ಎಪಿಎಂಸಿ ಬಳಿಯ ಹುಬ್ಬಳ್ಳಿ ಧಾರವಾಡ ಮಲ್ಟಿಪರ್ಪಸ್ ಎಕ್ಸಿಬಿಷನ್ ಸೆಂಟರ್ನಲ್ಲಿ ಮೂರು ದಿನಗಳ ನಡೆಯಲಿರುವ ವಾಲ್ವ ಎಕ್ಸ್ 2026 ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ಪಾದನೆಗೆ ನಿಖರ ಹಾಗೂ ಸರಳೀಕೃತ ವಿಧಾನ ಬಳಸಬೇಕು, ಕೇವಲ ಬೇಡಿಕೆ ಬಂದಷ್ಟೇ ಉತ್ಪಾದನೆ ಮಾಡುವ ಬದಲು ದೊಡ್ಡ ಮಟ್ಟದಲ್ಲಿ ತಯಾರಿಸಿ ಸ್ಟಾಕ್ ಇಟ್ಟುಕೊಂಡರೆ ವೆಚ್ಚ ತಾನಾಗಿಯೇ ಕಡಿಮೆಯಾಗುತ್ತದೆ. ಇದಕ್ಕಾಗಿ ದಿನದ 24 ತಾಸು, ವಾರದ ಎಲ್ಲ ದಿನಗಳು ಯಂತ್ರಗಳು ರನ್ ಆಗುತ್ತಿರಬೇಕು. ಆಗಲೇ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯ ಎಂದರು.
ಜಗತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ತಕ್ಕಂತೆ ಕೈಗಾರಿಕೆಗಳು ಗುಣಮಟ್ಟದ ಜತೆಗೆ ವೇಗವನ್ನೂ ಹೆಚ್ಚಿಸಿಕೊಳ್ಳಬೇಕು. ಯಾವುದೇ ಕಂಪನಿಯ ಕಾರ್ಬನ್ ಕಾಪಿ ಆಗದೆ ಸ್ವಂತಿಕೆ ಬೆಳೆಸಿಕೊಳ್ಳಬೇಕು. ಒಂದೇ ವಸ್ತುವಿನ ಉತ್ಪಾದನೆಯಾದರೂ ಸರಿ ಅದರಲ್ಲಿ ಶ್ರೇಷ್ಠತೆ ಸಾಧಿಸಬೇಕು. ವಾಲ್ವ ಇಂಡಸ್ಟ್ರೀ ಉತ್ತಮವಾಗಿ ಬೆಳೆದಿದೆ. ಯುರೋಪ, ಅಮೆರಿಕದಂತಹ ಹೆಚ್ಚು ಬೇಡಿಕೆ ಇರುವ ದೇಶಗಳಲ್ಲಿಯೂ ಶಾಖೆ ಆರಂಭಿಸಿ ಉದ್ಯಮ ವಿಸ್ತರಿಸಬೇಕು. ಕಂಪನಿಗಳೊಂದಿಗೆ ವೈಯಕ್ತಿಕ ಸಂಬಂಧಗಳನ್ನು ಕಾಪಾಡಿಕೊಂಡು ಉದ್ಯಮ ವೃದ್ಧಿಸಬೇಕು ಎಂದು ಅಭಿಪ್ರಾಯಪಟ್ಟರು.
ನಿರಾಣಿ ಗ್ರೂಪ್ನ ಸಂಗಮೇಶ ನಿರಾಣಿ ಮಾತನಾಡಿ, ಹುಬ್ಬಳ್ಳಿಯು ವಾಲ್ವ ಹಾಗೂ ಪಂಪ್ ಉತ್ಪಾದನೆಗೆ ಹೆಸರು ಪಡೆದಿದೆ. ಜಗತ್ತಿನ ಹಲವು ದೇಶಗಳಿಗೆ ಶ್ರೇಷ್ಠ ಇಂಜಿನಿಯರ್ಗಳು ಇಲ್ಲಿಂದಲೇ ಹೋಗಿದ್ದಾರೆ. ಅವರೆಲ್ಲ ಇಲ್ಲಿಯೇ ಉದ್ಯಮ ಆರಂಭಿಸಿದ್ದರೆ ಹುಬ್ಬಳ್ಳಿ ಐಟಿ ಸಿಟಿ ಆಗುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ, ದ್ವೀತಿಯ ಸ್ತರದ ನಗರಗಳತ್ತ ಉದ್ಯಮಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಹುಬ್ಬಳ್ಳಿ ದೊಡ್ಡ ಕೈಗಾರಿಕಾ ನಗರಿಯಾಗಲಿದೆ ಎಂದರು.
ಜೀವಮಾನ ಸಾಧನೆ ಪ್ರಶಸ್ತಿ
ಮೈಕ್ರೋಫಿನಿಷ್ ವಾಲ್ವ ಕಂಪನಿಯ ಸಂಸ್ಥಾಪಕ ತಿಲಕ ವಿಕಂಶಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ತಿಲಕ ವಿಕಂಶಿ ಅವರು, ಎರಡನೇ ವಾಲ್ವ ಎಕ್ಸ್ ಪ್ರದರ್ಶನ ಇದಾಗಿದ್ದು, ಬಹಳಷ್ಟು ಸುಧಾರಣೆಗಳು ಆಗಿವೆ. ಅಂತಾರಾಷ್ಟ್ರೀಯ ಕಂಪನಿಗಳು ಸಹ ಭಾಗಿಯಾಗಿರುವುದು ಖುಷಿಯ ಸಂಗತಿ ಎಂದರು.
ಸಮಿತಿ ಚೇರ್ಮನ್ ರಮೇಶ ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ವಾಲ್ವ ಉತ್ಪಾದಕರು ಇದ್ದು, ಹುಬ್ಬಳ್ಳಿಯಲ್ಲಿಯೇ ಬಹುಪಾಲು ಉದ್ಯಮಗಳಿವೆ. ದೇಶದ ವಾಲ್ವ ಉತ್ಪಾದನೆಯಲ್ಲಿ ಹುಬ್ಬಳ್ಳಿ ಶೇ. 15ರಷ್ಟು ಪಾಲು ಹೊಂದಿದೆ ಎಂದರು.
ಶಿವಾನಂದ ಆವಟಿ ಪ್ರಾಸ್ತಾವಿಕ ಮಾತನಾಡಿ, ಅನೇಕ ಸವಾಲುಗಳ ಮಧ್ಯೆಯೂ ವಾಲ್ವ ಬಿಜಿನೆಸ್ನಲ್ಲಿ ಹುಬ್ಬಳ್ಳಿ ಮುಂಚೂಣಿಯಲ್ಲಿದೆ. ಇಂಡಸ್ಟ್ರೀ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರದರ್ಶನ ಮೇಳ ಅನುಕೂಲವಾಗಲಿದೆ ಎಂದರು.