Unclean city ಮಳೆಯಿಂದಾಗಿ ಹದಗೆಟ್ಟ ರಸ್ತೆ ಕಾಣದ ಸ್ವಚ್ಛತೆ
Unclean city ಹುಬ್ಬಳ್ಳಿಯಲ್ಲಿ ಮೇಯರ್ ದುರ್ಗಮ್ಮ ಬಿಜವಾಡ ಅಧಿಕಾರಿಗಳ ಸಭೆ ನಡೆಸಿದರು. ಉಪಮೇಯರ್ ರತ್ನಾಬಾಯಿ ನಾಜರೆ, ಆಯುಕ್ತ ಡಾ. ರುದ್ರೇಶ ಘಾಳಿ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಲಿಕೆ ಅಧಿಕಾರಿಗಳ ಸಭೆ ನಡೆಸಿದ ನೂತನ ಮೇಯರ್
ನಗರ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
ಹುಬ್ಬಳ್ಳಿ: Unclean city ಮಳೆಗಾಲ ಆರಂಭವಾಗುತ್ತಿದ್ದಂತೆ ಮಹಾನಗರದ ರಸ್ತೆಗಳು ಹದಗೆಟ್ಟು ಹೋಗಿವೆ. ಸಂಪೂರ್ಣ ರಾಡಿಮಯ ರಸ್ತೆಯಲ್ಲಿ ಜನರು ಎದ್ದು ಬಿದ್ದು ಮೈಕೈ ನೋವು ಮಾಡಿಕೊಳ್ಳುತ್ತಿದ್ದಾರೆ.ಫುಟ್ಪಾತ್ ಗಳು ಪಾದಚಾರಿಗಳ ಸಂಚಾರಕ್ಕೆ ಲಭ್ಯವಾಗುತ್ತಿಲ್ಲ. ಸ್ವಚ್ಛತೆ ಎಂಬುದು ಮರೆಯಾಗಿದೆ.
ನಗರದ ಹೃದಯ ಭಾಗ ಚನ್ನಮ್ಮ ವೃತ್ತ, ರಾಯಣ್ಣ ಸರ್ಕಲ್ಗಳು ಸಂಚಾರಕ್ಕೆ ಯೋಗ್ಯವೇ ಇಲ್ಲವೆಂಬಷ್ಟು ಹಾಳಾಗಿವೆ. ಮೊಳಕಾಲುದ್ದದ ತಗ್ಗು ಗುಂಡಿಗಳಲ್ಲಿ ವಾಹನಗಳು ನಿಂತು ಸಾಗುತ್ತಿವೆ. ಇದರಿಂದ ಟ್ರಾಫಿಕ್ ಜಾಮ್ ಸಾಮಾನ್ಯ ಎಂಬಂತಾಗಿದೆ.
ಇಷ್ಟು ಮಾತ್ರವಲ್ಲ, ಚನ್ನಮ್ಮ ವೃತ್ತದ ಸುತ್ತಲಿನ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ದೇಸಾಯಿ ಸರ್ಕಲ್, ಬಾಳಿಗಾ ಸರ್ಕಲ್, ದೇಶಪಾಂಡೆನಗರ, ಅಂಬೇಡ್ಕರ್ ಸರ್ಕಲ್, ಭಾರತ ಮಿಲ್ ಸರ್ಕಲ್, ಹೊಸೂರ ಸರ್ಕಲ್ ಎಲ್ಲ ಕಡೆ ವಾಹನಗಳು ಬಹಳ ಹೊತ್ತು ಕಾಯಬೇಕಾಗಿದೆ.
ಈ ಮಧ್ಯೆ ಸ್ವಚ್ಛತೆ ಎಂಬುದು ಇಲ್ಲ. ಕಸ ಅಲ್ಲಲ್ಲಿ ಸಂಗ್ರಹಗೊಂಡು ಗಲೀಜು ವಾತಾವರಣ ನಿರ್ಮಾಣವಾಗಿದೆ ಎಂದು ನಾಗರಿಕರು ದೂರುತ್ತಿದ್ದಾರೆ. ಇಂತಹ ಅನೇಕ ದೂರುಗಳ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯಲ್ಲಿ ನೂತನ ಮೇಯರ್ ದುರ್ಗಮ್ಮ ಬಿಜವಾಡ ಅವರು ಅಧಿಕಾರಿಗಳ ಸಭೆ ನಡೆಸುವ ಮೂಲಕ ಆಡಳಿತಕ್ಕೆ ಚುರುಕು ನೀಡುವ ಪ್ರಯತ್ನ ಮಾಡಿದರು.
ಆಯುಕ್ತರು, ವಿವಿಧ ವಲಯ ಕಚೇರಿ ಸಹಾಯಕ ಆಯುಕ್ತರು, ಇಂಜಿನಿಯರ್ಗಳೊಂದಿಗೆ ಸಭೆ ನಡೆಸಿ ನಗರದಲ್ಲಿ ತಕ್ಷಣಕ್ಕೆ ಆಗಬೇಕಾದ ಕೆಲಸಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ನಗರ ಸ್ವಚ್ಛತೆಗೆ ಆದ್ಯತೆ ನೀಡಿ
ಸ್ವಚ್ಛ ನಗರ ನಿರ್ಮಾಣ ಪಾಲಿಕೆ ಆಡಳಿತದ ಆದ್ಯತೆಯಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಅಪಾಯಕಾರಿಯಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು, ಚರಂಡಿಗಳ ಸ್ವಚ್ಛತೆ ಹಾಗೂ ಫುಟ್ಪಾತ್ ಅತಿಕ್ರಮಣ ತೆರವು ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕೆಂದು ಮೇಯರ್ ದುರ್ಗಮ್ಮ ಬಿಜವಾಡ ಸೂಚಿಸಿದ್ದಾರೆ.
ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಹೇಳಿದ್ದೆ. ಅದರಂತೆ ನಡೆದುಕೊಳ್ಳುವೆ. ಈಗ ಮಳೆ ಆರಂಭವಾಗಿರುವುದರಿಂದ ಮರಗಳು ಕೆಲವೆಡೆ ಬೀಳುವ ಅಪಾಯ ಇದೆ. ಅಂತಹ ಮರಗಳ ಕೊಂಬೆಗಳನ್ನು ಕತ್ತರಿಸಿ ಸಾರ್ವಜನಿಕರ ಸುರಕ್ಷತೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿವಿಧೆಡೆ ಚರಂಡಿಗಳು ತುಂಬಿ ಕೊಳಚೆ ನಿಲ್ಲುತ್ತಿದ್ದು, ಅವುಗಳನ್ನು ತಕ್ಷಣವೇ ಸ್ವಚ್ಛಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಗರದ ಸ್ವಚ್ಛತೆಗೆ ಸಂಬಂಧಿಸಿದಂತೆ ಪ್ರತಿ ವಾರ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಫುಟ್ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಕೆಲವರು ಮತ್ತೆ ಪಾದಚಾರಿ ಮಾರ್ಗದ ಮೇಲೆ ಅಂಗಡಿ ಸಾಮಗ್ರಿ, ಬೋರ್ಡ್ ಹಾಗೂ ಇತರೆ ವಸ್ತುಗಳನ್ನು ಇಟ್ಟು ಅತಿಕ್ರಮಣ ಮಾಡುತ್ತಿದ್ದಾರೆ. ಎರಡು ಬಾರಿ ಎಚ್ಚರಿಕೆ ನೀಡಲಾಗುವುದು. ಆದರೂ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ಜೊತೆಗೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಗರದ ಎಲ್ಲ ವಾರ್ಡ್ಗಳಲ್ಲಿ ಬೆಳಗ್ಗೆ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಸ್ವಚ್ಛತಾ ವಾಹನಗಳೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ. ಕೇವಲ ಪಾಲಿಕೆಯ ಸಿಬ್ಬಂದಿಯಿಂದ ಸ್ವಚ್ಛತೆ ಸಾಧ್ಯವಿಲ್ಲ. ಸಾರ್ವಜನಿಕರೂ ಸ್ವಚ್ಛ ಭಾರತ ಅಭಿಯಾನದ ಭಾಗವಾಗಿ ಸ್ವಚ್ಛತೆಯನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಮೇಯರ್ ಮನವಿ ಮಾಡಿದರು.
ಎಸ್ಐಆರ್ ಪ್ರಕ್ರಿಯೆಯಿಂದ ಕೆಲ ಸಾರ್ವಜನಿಕ ಸೇವೆಗಳಲ್ಲಿ ತಾತ್ಕಾಲಿಕ ವಿಳಂಬ ಉಂಟಾಗಿದೆ. ಒಂದು ತಿಂಗಳು ಮಾತ್ರ ಸಮಸ್ಯೆ. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಎಲ್ಲ ಸೇವೆಗಳು ಸಹಜ ಸ್ಥಿತಿಗೆ ಬರಲಿವೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.