ಹುಬ್ಬಳ್ಳಿ ತಾಲೂಕಿನ ಉಣಕಲ್ಲ ಗ್ರಾಮದ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ನ. 24ರಂದು ಸಂಜೆ 6.30ಕ್ಕೆ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಮಣ್ಣ ಕೊಕಾಟೆ ಹೇಳಿದರು.
ಹುಬ್ಬಳ್ಳಿ: ತಾಲೂಕಿನ ಉಣಕಲ್ಲ ಗ್ರಾಮದ ಪುರಾತನ ಪ್ರಸಿದ್ಧ ಶ್ರೀ ಕಲ್ಮೇಶ್ವರ ದೇವಸ್ಥಾನದಲ್ಲಿ ನ. 24ರಂದು ಬೆಳಗ್ಗೆ ಪ್ರಾತಃಕಾಲ ಶ್ರೀ ಕಲ್ಮೇಶ್ವರ ದೇವರ ಮೂರ್ತಿಗೆ ರುದ್ರಾಭಿಷೇಕ, ಮಧ್ಯಾಹ್ನ 3ಕ್ಕೆ ಶ್ರೀ ದೇವರ ಮೂರ್ತಿಯೊಂದಿಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ಸಂಜೆ 6.30ಕ್ಕೆ ಕಾರ್ತಿಕ ದೀಪೋತ್ಸವ ಆಯೋಜಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ರಾಮಣ್ಣ ಕೊಕಾಟೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾರ್ತಿಕೋತ್ಸವ ಅಂಗವಾಗಿ ಬುಧವಾರದಿಂದ ನ. 23ರವರೆಗೆ ಪ್ರತಿದಿನ ಸಂಜೆ 7.30ರಿಂದ 8.30ರವರೆಗೆ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಅವರಿಂದ ಪ್ರವಚನ ನಡೆಯಲಿದೆ. ಸುಳ್ಳ ಪಂಚಗೃಹ ಹಿರೇಮಠದ ಶ್ರೀ ಶಿವಸಿದ್ಧರಾಮ ಶಿವಯೋಗಿ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು ಎಂದರು.
23ರಂದು ಬೆಳಗ್ಗೆ 8.30ಕ್ಕೆ ಅಕ್ಕನ ಬಳಗದಿಂದ ಇಷ್ಟಲಿಂಗ ಧಾರಣೆ ಮಹೋತ್ಸವ ಹಮ್ಮಿಕೊಂಡಿದ್ದು 8 ವರ್ಷ ಮೇಲ್ಪಟ್ಟವರಿಗೆ ಇಷ್ಟಲಿಂಗ ಧಾರಣೆ ಮಾಡಲಾಗುವುದು. ಪ್ರತಿದಿನ ಪ್ರವಚನ ನಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಮುಳ್ಳೊಳ್ಳಿ, ಬಸವರಾಜ ಚನ್ನೂರ, ಅಶೋಕ ಚಿಲ್ಲಣ್ಣವರ, ಬಸವರಾಜ ಹುಬ್ಬಳ್ಳಿ, ನಾಗಪ್ಪ ಸುತಗಟ್ಟಿ, ಮಹಾದೇವಪ್ಪ ಕಡಪಟ್ಟಿ ಇದ್ದರು.