ಹುಬ್ಬಳ್ಳಿ: ಸಾಧಕ ಉದ್ಯಮಿಗಳಿಗೆ ಉತ್ತೇಜನ ನೀಡುವುದು ಹಾಗೂ ಯುವಕರಿಗೆ ಪ್ರೋತ್ಸಾಹಿಸುವ ಸಲುವಾಗಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆ ಸಂಘ ಕೊಡಮಾಡುವ ಉದ್ಯಮಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ಏರ್ಪಡಿಸಲಾಗಿದ್ದ ವರ್ಣರಂಜಿತ ಸಮಾರಂಭದಲ್ಲಿ ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳ 18 ಜನ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿ ಮಾತನಾಡಿದ ಶಾಸಕ ಮಹೇಶ ಟೆಂಗಿನಕಾಯಿ ಅವರು, ಉತ್ತರ ಕರ್ನಾಟಕ ಭಾಗದಲ್ಲಿ ಔದ್ಯಮಿಕ ಕ್ಷೇತ್ರ ನಿರೀಕ್ಷೆಯಷ್ಟು ಪ್ರಮಾಣದಲ್ಲಿ ಬೆಳವಣಿಗೆ ಕಂಡಿಲ್ಲ ಎಂಬುದು ಎಲ್ಲರ ಕೊರಗು. ಈ ಬಗ್ಗೆ ಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಇಚ್ಚಾಶಕ್ತಿ ಕೊರತೆಯಿಂದ ಧಾರವಾಡಕ್ಕೆ ಎಫ್ಎಂಸಿಜಿ ಕ್ಲಸ್ಟರ್ ಬರುತ್ತಿಲ್ಲ. ಈಗಿನ ಸರ್ಕಾರ ರಿಯಾಯಿತಿಗಳನ್ನು ಘೋಷಣೆ ಮಾಡುವ ಮೂಲಕ ಉದ್ಯಮಿಗಳನ್ನು ಸೆಳೆಯಬೇಕು. ಇದರ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವುದಾಗಿ ಶಾಸಕರು ಭರವಸೆ ನೀಡಿದರು.
ಒಂದೊಮ್ಮೆ ದೊಡ್ಡ ಉದ್ಯಮ ಇಲ್ಲಿಗೆ ಬಂದರೆ ಅನೇಕ ಸಣ್ಣ ಉದ್ಯಮಗಳು ಬೆಳೆಯುತ್ತವೆ. ಯುವಕರು ನೌಕರಿ ಹುಡುಕುವ ಬದಲು ಕೆಲಸ ಕೊಡುವಂತವರಾಗಬೇಕು. ಉದ್ಯಮಿಯಾದರೆ ಹಲವು ಜನರಿಗೆ ಉದ್ಯೋಗ ಕೊಡುವ ಕೆಲಸವಾಗುತ್ತದೆ ಎಂದರು.
ಕಾಶಿಯಾ ಅಧ್ಯಕ್ಷ ನಿಂಗಣ್ಣ ಬಿರಾದಾರ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮಿಗಳಲ್ಲಿ ಒಕ್ಕಟ್ಟು ಇಲ್ಲದ ಕಾರಣಕ್ಕೆ ಅನೇಕ ಸಮಸ್ಯೆಗಳು ಹಾಗೇ ಉಳಿದಿವೆ. ಒಟ್ಟಾಗಿ ಹೋದರೆ ಸರ್ಕಾರದ ಗಮನ ಸೆಳೆಯಬಹುದು. ಬೆಳಗಾವಿ ಅಧಿವೇಶನ ಸಮಯದಲ್ಲಿ ಎಲ್ಲರೂ ಸೇರಿ ಪ್ರಯತ್ನ ಮಾಡೋಣ, ನಿಯೋಗ ಕೊಂಡೊಯ್ದು ಪರಿಹಾರಕ್ಕೆ ಆಗ್ರಹಿಸೋಣ ಎಂದರು.
ಎನ್ಕೆಎಸ್ಎಸ್ಐ ಅಧ್ಯಕ್ಷ ರಮೇಶ ಪಾಟೀಲ ಮಾತನಾಡಿ, ಔದ್ಯಮಿಕ ಬೆಳವಣಿಗೆ ಹಾಗೂ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರಶಸ್ತಿ ನೀಡುತ್ತ ಬರಲಾಗಿದೆ. ಯುವಕರಿಗೆ ಇದರಿಂದ ಸ್ಪೂರ್ತಿ ಸಿಗಲಿದೆ. ಮಹಿಳೆಯರು ಸಹ ಉದ್ಯಮದಲ್ಲಿ ಮುಂದೆ ಬರಬೇಕು ಎಂಬುದು ಸಂದ ಇಚ್ಚೆ ಎಂದರು.
ಪ್ರಶಸ್ತಿ ಕಾರ್ಯಕ್ರಮ ಸಮಿತಿ ಚೇರ್ಮನ್ ಗಿರೀಶ ಮಾನೆ ಮಾತನಾಡಿ, ಯಶಸ್ವಿ ಉದ್ಯಮಿಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಇತತರಿಗೆ ಸ್ಪೂರ್ತಿ ತುಂಬುವ ಸಲುವಾಗಿ ಆರು ವಿಭಾಗಗಳಲ್ಲಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಪತಿ ಭಟ್ ಪ್ರಾಸ್ತಾವಿಕ ಮಾತನಾಡಿದರು.
ವಿಜೇತರು: ಪುಷ್ಪಾ ಪಾಟೀಲ, ನಿರ್ಮಲಾ ಕೊಳ್ಳಿ, ಜಯಪ್ರಕಾಶ ಟೆಂಗಿನಕಾಯಿ, ವಿಠ್ಠಲ ಖಟಾವಕರ, ಪ್ರಭು ದಯಾಳ, ಡಾ. ಕೃಷ್ಣ ಕುಲಕರ್ಣಿ, ಶಿವಪ್ಪ ದೇವರಗುಡಿ, ರಮೇಶ ನಾಯಕ, ಸುಧೀರ ದರೇಕರ, ಚಂದ್ರಕಾಂತ ವಿ, ಪ್ರಿತೇಶ ವಿ.ಟಿ, ಎಂ.ಪಿ. ನಾಗರಾಜ ಅವರಿಗೆ ಉದ್ಯಮಿ ರತ್ನ ಹಾಗೂ ಶ್ರೇಷ್ಠ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಉದ್ಯಮಿ ಎಂ.ವಿ. ಕರಮರಿ ಹಾಗೂ ಶಂಕರಣ್ಣ ಮುನವಳ್ಳಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಂಘದ ಪದಾಧಿಕಾರಿಗಳಾದ ವಿಜೇಶ ಸೈಗಲ್, ನಾಗೇಶ ರಿತ್ತಿ, ಪ್ರಶಾಂತ ಅಚಲಕರ, ಅಶೋಕ ಕೊಣ್ಣೂರ, ನರೇಂದ್ರ ಕುಲಕರ್ಣಿ, ಮನೋಹರ ಕೊಟ್ಟೂರಶೆಟ್ರ, ಉದಯ ಪುರಾಣಿಕಮಠ, ಜಗದೀಶ ಮಠದ, ಇತರರು ಉಪಸ್ಥಿತರಿದ್ದರು.