ಧಾರವಾಡ: ಸಿವಿಲ್ ಪೊಲೀಸ್ ಹಾಗೂ ಡಿಆರ್ ಸಿಆರ್ ಪೊಲೀಸ್ ನೇಮಕಾತಿಯಲ್ಲಿ `ಐಟಿಐ ಕೋರ್ಸ್' ಅನ್ನು ದ್ವಿತೀಯ ಪಿಯುಸಿಗೆ ಸಮಾನ ಮಾನ್ಯತೆಯಾಗಿ ಪರಿಗಣಿಸುವಂತೆ ಒತ್ತಾಯಿಸಿ ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಪದಾಧಿಕಾರಿಗಳು ಜಿಲ್ಲಾಽಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಹಲವು ಹೋರಾಟಗಳ -ಫಲವಾಗಿ ರಾಜ್ಯ ಸರ್ಕಾರ ಸಿವಿಲ್ ಪೊಲೀಸ್ ಹಾಗೂ ಡಿಆರ್ ಸಿಆರ್ ಪೊಲೀಸ್ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ವಿದ್ಯಾರ್ಹತೆಯಲ್ಲಿ ಐಟಿಐ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಕಡ್ಡಾಯವಾಗಿ ಏನ್.ಐ.ಒ.ಎಸ್ ನಲ್ಲಿ ಭಾಷಾ ಕೋರ್ಸ್ ಹಾಗೂ ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಿರುವುದು ಐಟಿಐ ಪಾಸಾದವರಿಗೆ ತೊಂದರೆಯಾಗಿದೆ.
ಈ ಹಿಂದೆ ರಾಜ್ಯ ಸರ್ಕಾರವು ಐಟಿಐ ಪೂರ್ಣಗೊಳಿಸಿದವರಿಗೆ ಅರ್ಜಿ ಹಾಕಲು ಅವಕಾಶ ನೀಡಿತ್ತು ಹಾಗೂ ಐಟಿಐ ಕೋರ್ಸ್ ಅನ್ನು ದ್ವಿತೀಯ ಪಿಯುಸಿಗೆ ಸಮಾನ ಮಾನ್ಯತೆಯಾಗಿ ಪರಿಗಣಿಸಲಾಗಿತ್ತು. ಆದರೀಗ ಎನ್‌ಐಓಎಸ್ ಪರೀಕ್ಷೆಯನ್ನು ಕಡ್ಡಾಯವಾಗಿ ಉತ್ತೀರ್ಣವಾಗಿರಬೇಕು ಎಂದು ಮಾಡಿರುವುದು ಬಹುದೊಡ್ಡ ಸಂಖ್ಯೆ ಅಭ್ಯರ್ಥಿಗಳನ್ನು ಹೊರಗೆ ಉಳಿಯುವಂತೆ ಮಾಡಿದೆ.
ಎನ್‌ಐಒಎಸ್ ಭಾಷಾ ಪರೀಕ್ಷೆಗಳನ್ನು ನಿಯಮಿತವಾಗಿ ನಡೆಸದಿರುವುದು ಮತ್ತೆ ಅದರ ಬಗ್ಗೆ ಸರಿಯಾದ ಮಾಹಿತಿ ಲಭ್ಯವಿಲ್ಲ್ಲದಿರುವುದು ಬಹಳಷ್ಟು ಐಟಿಐ ಮುಗಿಸಿದ ವಿದ್ಯಾರ್ಥಿಗಳಿಗೆ ತೊಂದರೆ ಉಂಟು ಮಾಡಿದೆ. ಹೀಗಾಗಿ ಈ ನೇಮಕಾತಿಯಲ್ಲಿ ಐಟಿಐ ಕೋರ್ಸ್ ಅನ್ನು ದ್ವಿತೀಯ ಪಿಯುಸಿಗೆ ಸಮಾನ ಮಾನ್ಯತೆಯಾಗಿ ಪರಿಗಣಿಸಬೇಕು. ಏನ್‌ಐಒಎಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಿರುವುದನ್ನು ಕೈಬಿಡಬೇಕು ಹಾಗೂ ಡಿಪ್ಲೋಮಾ ಹಾಗೂ ಜೆಓಸಿ ಅವರಿಗೆ ಅವಕಾಶ ನೀಡಿದಂತೆ ಇವರಿಗೂ ಅವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.