ಕಾಯುತ್ತಿದ್ದ ಸೆಟ್ಲಮೆಂಟ್ ಶಾಂತಿನಿಕೇತನ ಕಾಲನಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವ ಮೂಲಕ ಅವರ ಜೀವನ ಭದ್ರತೆಗೆ ಕಾನೂನುಬದ್ಧ ಹಕ್ಕು ಒದಗಿಸಲಾಗಿದೆ ಎಂದು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ನಗರದ ಸೆಟ್ಲಮೆಂಟ್ ಶಾಂತಿನಿಕೇತನ ಕಾಲನಿಯ 106 ವರ್ಷಗಳಿಂದ ಹಕ್ಕು ವಂಚಿತರಾಗಿದ್ದ 362 ಕುಟುಂಬಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.
ಮನೆ ಎಂಬುದು ಬಡವರ ಪಾಲಿನ ಬದುಕಿನ ಭದ್ರತೆ, ಮಕ್ಕಳ ಭವಿಷ್ಯದ ನೆಲೆಯಾಗಿದೆ. ನೂರಾರು ವರ್ಷಗಳಿಂದ ತಾವು ವಾಸಿಸುತ್ತಿರುವ ಮನೆಗಳಿಗೆ ಕಾನೂನುಬದ್ಧ ಹಕ್ಕು ದೊರೆಯಬೇಕೆಂಬುದು ಇಲ್ಲಿನ ನಿವಾಸಿಗಳ ಪ್ರಮುಖ ಬೇಡಿಕೆಯಾಗಿತ್ತು. ಇದೀಗ ಹಕ್ಕುಪತ್ರ ದೊರೆತಿರುವುದರಿಂದ ನೂರಾರು ಕುಟುಂಬಗಳ ಬಹುಕಾಲದ ನಿರೀಕ್ಷೆ ಈಡೇರಿದಂತಾಗಿದೆ ಎಂದು ಹೇಳಿದರು.
ಶಿಕ್ಷಣವೇ ಬದುಕಿಗೆ ಆಧಾರ. ಎಲ್ಲರಂತೆ ಗೌರವಯುತವಾಗಿ ಬದುಕಬೇಕಾದರೆ ಮೊದಲು ಸುಶಿಕ್ಷಿತರಾಗಬೇಕು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಭವಿಷ್ಯವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಬಡ ಕುಟುಂಬಗಳು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.