ಉದ್ಯೋಗಾಕಾಂಕ್ಷಿಗಳ ಹೋರಾಟ ನ್ಯಾಯಯುತ: ಆರ್. ಅಶೋಕ

ಪ್ರತಿಭಟನಾ ಸಭೆಯಲ್ಲಿ ಆರ್. ಅಶೋಕ
ಪ್ರತಿಭಟನಾ ಸಭೆಯಲ್ಲಿ ಆರ್. ಅಶೋಕ
Published on
ಧಾರವಾಡ: ರಾಜ್ಯದ ಖಾಲಿ ಹುದ್ದೆಗಳ ಭರ್ತಿಗೆ ಉದ್ಯೋಗಾಕಾಂಕ್ಷಿಗಳ ಹೋರಾಟ ನ್ಯಾಯಯುತವಾಗಿದೆ. ಈ ಬಗ್ಗೆ ಮಾ. 6ರಿಂದ ಆರಂಭಗೊಳ್ಳುವ ವಿಧಾನಮಂಡಲ ಅಧಿವೇಶನದಲ್ಲಿ ಅವರ ಪರವಾಗಿ ಧ್ವನಿ ಎತ್ತುತ್ತೇವೆ ಎಂದು ವಿಧಾನಸಭೆ ವಿರೋಧಪಕ್ಷ ನಾಯಕ ಆರ್. ಅಶೋಕ ಹೇಳಿದರು.
ನಗರದ ಮಿಚಿಗನ್ ಕಾಂಪೌಂಡ್ ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯಿಸಿ ಬಿಜೆಪಿಯಿಂದ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಸಿಎಂ ಜಾಬ್‌ಗಾಗಿ ಹೋರಾಟ ನಡೆಸುತ್ತಿದ್ದಾರೆ. ಹೀಗಾಗಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಹುದ್ದೆಗಳ ಬಗ್ಗೆ ಅವರು ಯೋಚನೆ ಮಾಡುತ್ತಿಲ್ಲ. ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು. ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.
ಹೊಸ ಉದ್ಯೋಗ ಸೃಷ್ಟಿಸಿ ಎಂದು ನಾವು ನಿಮ್ಮನ್ನು ಕೇಳುತ್ತಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಸಾಕು. ಇಲ್ಲದಿದ್ದರೆ ನಮ್ಮ ಬಳಿ ದುಡ್ಡು ಇಲ್ಲ ಎಂದು ಹೇಳಿಬಿಡಿ ಎಂದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಂಜುಂಡಪ್ಪ ವರದಿಯಲ್ಲಿದ್ದಂತಹ ಹಿಂದುಳಿದ ತಾಲೂಕುಗಳ ಸಂಖ್ಯೆ ಡಬಲ್ ಆಗಿವೆ. ಅವರಿಗೆ ಉದ್ಯೋಗ ಮಾತ್ರವಲ್ಲ, ನಿರುದ್ಯೋಗ ಭತ್ಯೆಯನ್ನೂ ಕೊಡಲು ಆಗುತ್ತಿಲ್ಲ ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಯುವಕರಿಗೆ ಉದ್ಯೋಗ ನೀಡದೆ ಅವರನ್ನು ನಾಶಗೊಳಿಸುವುದೇ ಕಾಂಗ್ರೆಸ್‌ನ 6ನೇ ಗ್ಯಾರಂಟಿ. ಯುವಕರನ್ನು ಬೀದಿಗಿಳಿಸಿದ ಯಾವುದೇ ಸರ್ಕಾರ ಬದುಕಿಲ್ಲ ಎಂದರು.
ಯುವಕರಿಗೆ ಕೆಲಸ ಕೊಟ್ಟರೆ ಅವರಿಗೆ ಸಂಬಳ ಕೊಡಲೂ ದುಡ್ಡಿಲ್ಲ. ಹಾಗಾದರೆ ಜನರ ದುಡ್ಡು ಎಲ್ಲಿಗೆ ಹೋಗಿದೆ? ಬಿಹಾರ, ಮಹಾರಾಷ್ಟ್ರ ಚುನಾವಣೆಗೆ ಹೋಯಿತಾ? ಕೇರಳ, ತಮಿಳುನಾಡು ಚುನಾವಣೆಗೆ ಜಮೆ ಮಾಡಿಟ್ಟಿದ್ದೀರೂ ಹೇಳಿ ಎಂದು ಪ್ರಶ್ನಿಸಿದರು.
ವಿಧಾನಸಭೆ ವಿರೋಧಪಕ್ಷ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, ವಿದ್ಯಾರ್ಥಿಗಳ ನೋವು, ಸಂಕಟವನ್ನು ಮಲಗಿದ ನಿದ್ರಾಮಯ್ಯ ಸರ್ಕಾರಕ್ಕೆ ತಿಳಿಸಲು ಈ ಹೋರಾಟ ರೂಪಿಸಲಾಗಿದೆ ಎಂದರು.
ವಿದ್ಯಾರ್ಥಿ ಸಂಘಟನೆಯ ಕಾಂತಕುಮಾರ, ಮೇಯರ್ ಜ್ಯೋತಿ ಪಾಟೀಲ, ಮುಖಂಡರಾದ ಲಿಂಗರಾಜ ಪಾಟೀಲ, ಭರತ್ ಬೊಮ್ಮಾಯಿ, ಶಿವು ಹಿರೇಮಠ, ಮಹೇಂದ್ರ ಕೌತಾಳ, ನಾಗರಾಜ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net