ಒತ್ತುವರಿದಾರರಿಗೆ ಶುರುವಾಯ್ತು ಢವಢವ!

ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ
Published on
ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯ ಸುಮಾರು 888 ಎಕರೆ ವಿಸ್ತೀರ್ಣ ಹೊಂದಿದೆ. ಪಾವಟೆನಗರದ ಕ್ಯಾಂಪಸ್‌ನಲ್ಲಿ ಮುಖ್ಯ ಕಟ್ಟಡ, ಆಡಳಿತ ಭವನ, ಮೌಲ್ಯಮಾಪನ ಕಚೇರಿ, ಆಟದ ಮೈದಾನ, ವಿಶಾಲವಾದ ಉದ್ಯಾನಗಳಿವೆ. ಇದಲ್ಲದೆ, ನಗರದ ಹಲವೆಡೆ ವಿಶ್ವವಿದ್ಯಾಲಯದ ಆಸ್ತಿ ಚದುರಿ ಹೋಗಿದ್ದು, ಅನೇಕ ಕಡೆಗಳಲ್ಲಿ ಅತಿಕ್ರಮಣವಾಗಿದೆ. ಇದನ್ನು ತಡೆಯಲು ವಿಶ್ವವಿದ್ಯಾಲಯ ಸರ್ವೇ ಕಾರ್ಯಕ್ಕೆ ಮುಂದಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಆಸ್ತಿ ಅತಿಕ್ರಮಣವಾಗಿರುವ ಕುರಿತು ಅನೇಕರು ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಶಿಕ್ಷಣ ತಜ್ಞರು, ನಿವೃತ್ತ ಪ್ರಾಧ್ಯಾಪಕರು, ವಿಶ್ವವಿದ್ಯಾಲಯದ ಹಿತೈಷಿಗಳ ಬೇಡಿಕೆ ಇತ್ತು. ವಿಶ್ವವಿದ್ಯಾಲಯದ ಹಿಂದಿನ ಆಡಳಿತಾಧಿಕಾರಿಗಳು ಸರ್ವೇ ಕಾರ್ಯಕ್ಕೆ ಮುಂದಾದರೂ ಸರಿಯಾಗಿ ಅನುಷ್ಠಾನ ಆಗಿರಲಿಲ್ಲ. ಡಾ. ಎ.ಎಂ. ಖಾನ್ ಕುಲಪತಿಯಾಗಿ ಬಂದ ನಂತರ ಕವಿವಿ ಆಸ್ತಿ ಸರ್ವೇಗೆ ಒತ್ತು ನೀಡಿದ್ದಾರೆ.
ನಗರದಲ್ಲಿ ಇರುವ ವಿಶ್ವವಿದ್ಯಾಲಯದ ಆಸ್ತಿಯ ಸರ್ವೇ ಕಾರ್ಯ ನಡೆಸಬೇಕು ಎಂದು ಸಿಂಡಿಕೇಟ್ ಸಮಿತಿಯೂ ಒತ್ತಾಯಿಸಿತ್ತು. ಸರ್ವೇ ಕಾರ್ಯಕ್ಕೆ ಸಿಂಡಿಕೇಟ್ ಸಭೆಯ ಅನುಮೋದನೆ ಪಡೆಯಲಾಗಿದೆ. ಆರಂಭದಲ್ಲಿ ವಿಶ್ವವಿದ್ಯಾಲಯದ ಆಸ್ತಿಯ ದಾಖಲೆಗಳನ್ನು ಕ್ರೋಡೀಕರಿಸಲಾಗುತ್ತಿದೆ. ಅದಕ್ಕಾಗಿ ಸರ್ವೇ ಇಲಾಖೆಯ ನಿವೃತ್ತ ಸಿಬ್ಬಂದಿಯೊಬ್ಬರನ್ನು 3 ತಿಂಗಳ ಮಟ್ಟಿಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಆಸ್ತಿಯ ದಾಖಲೆಗಳನ್ನು ಸಂಗ್ರಹಿಸಿ ಸ್ಥಳ ಪರಿಶೀಲನೆ ಮಾಡಿ ವರದಿ ಪಡೆಯಲಾಗುತ್ತದೆ. ನಂತರ ಡ್ರೋನ್ ಮೂಲಕ ಸರ್ವೇ ನಡೆಸಿ ಆಸ್ತಿಯ ಗಡಿ ಗುರುತು ಕಾರ್ಯ ನಡೆಸಲಾಗುತ್ತದೆ. ಕೆಲವೆಡೆ ಪ್ರಭಾವಿಗಳಿಂದ ಅತಿಕ್ರಮಣವಾಗಿರುವ ದೂರುಗಳು ಇವೆ. ಹೀಗಾಗಿ ಅತಿಕ್ರಮಣ ತೆರವಿಗಾಗಿ ಸರ್ವೇ ವರದಿಯನ್ನು ಮುಖ್ಯಮಂತ್ರಿ ಕಚೇರಿಗೆ ಕಳುಹಿಸಿ ಮುಂದಿನ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯ ಸುಮಾರು 888 ಎಕರೆ ವಿಸ್ತೀರ್ಣ ಹೊಂದಿದ್ದು, ಹಲವೆಡೆ ಅತಿಕ್ರಮಣವಾಗಿರುವ ದೂರುಗಳಿವೆ. ಅತಿಕ್ರಮಣ ತೆರವು ಮಾಡಿ ವಿಶ್ವವಿದ್ಯಾಲಯದ ಆಸ್ತಿಯನ್ನು ಸಂರಕ್ಷಿಸಬೇಕು ಎಂದು ಅನೇಕರು ಒತ್ತಾಯಿಸಿದ್ದರು. ಹೀಗಾಗಿ ಸರ್ವೇ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಮೊದಲು ವಿಶ್ವವಿದ್ಯಾಲಯದ ಆಸ್ತಿಯ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಡಿಜಿಟಲ್ ತಂತ್ರಜ್ಞಾನ ಬಳಸಿ ಸರ್ವೇ ನಡೆಸಲಾಗುವುದು. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

— ಡಾ. ಎ.ಎಂ. ಖಾನ್, ಕವಿವಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net