ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಮಳೆ rain ಇಲ್ಲದೆ ಸೋಯಾಬಿನ್ ಬೆಳೆ ಒಣಗಿರುವುದು.
Published on:
Copied
Follow Us
ಕಲಘಟಗಿ: ಮುಂಗಾರು ಹಂಗಾಮು ಬಂದ್ರೆ ಸಾಕು ರೈತರ ಮುಖದಲ್ಲಿ ಎಲ್ಲಿಲ್ಲದ ಸಂತೋಷ. ವಿವಿಧ ಕೃಷಿ ಚಟುವಟಿಕೆಗಳು ಗರಿಗೆದರುತ್ತಿದ್ದವು. ಆದರೆ, ಈ ಬಾರಿ ಮೃಗಶಿರ ಮಳೆ rain ಕೈಕೊಟ್ಟಿದ್ದರಿಂದ ತಾಲೂಕಿನ ರೈತರು ತಲೆ ಮೇಲೆ ಕೈ ಇಟ್ಟುಕೊಂಡು ಆಕಾಶದತ್ತ ಮುಖ ಮಾಡಿ ಕಾದು ಕುಳಿತಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನ ಪೂರ್ವದಲ್ಲಿಯೇ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ತಾಲೂಕಿನ ಶೇ.40 ರಷ್ಟು ರೈತರು ರೋಹಿಣಿ ಮಳೆಯ ಪೂರ್ವದಲ್ಲಿಯೇ ಬಿತ್ತನೆ ಮಾಡಿ, ಮೃಗಶಿರ ಮಳೆಗಾಗಿ ಕಾದು ಕುಳಿತಿದ್ದರು.
ಆದರೆ, ಮೃಗಶಿರ ಮಳೆ ಬಾರದೆ ಇರುವುದರಿಂದ ಈಗಾಗಲೇ ಬಿತ್ತನೆ ಮಾಡಿದ ಶೇ.25 ರಷ್ಟು ಬೀಜಗಳು ಮೊಳಕೆಯೊಡೆಯದೆ ಹಾನಿಯಾಗಿ, ರೈತರು ಮರು ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ.
ಜೂ.8 ಕ್ಕೆ ಸುರಿಯಬೇಕಿದ್ದ ಮೃಗಶಿರ ಮಳೆ ಬಾರದೆ ಇರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆಯಾದಂತಾಗಿದೆ. ಮೃಗಶಿರ ಮಳೆಯ ಹೊತ್ತಿಗೆ ಮೆಕ್ಕೆಜೋಳ, ಸೋಯಾಬೀನ್, ಕಬ್ಬು ಸೇರಿದಂತೆ ಅನೇಕ ಬೆಳೆಗಳಿಗೆ ಎಡೆಕುಂಟೆ, ಗೊಬ್ಬರ ಧಾರಣೆ, ಔಷಧ ಸಿಂಪಡಣೆ ಹೀಗೆ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದರು.
ಆದರೆ, ಇದುವರೆಗೂ ಮೃಗಶಿರ ಮಳೆಯಾಗದೆ ರೈತರು ಆಕಾಶದತ್ತ ಮುಖ ಮಾಡಿದ್ದಾರೆ.
ಎಲ್‌ನಿನೋ ಎಫೆಕ್ಟ್: ಫೆಸಿಪಿಕ್ ಮಹಾಸಾಗರದ ಮೇಲ್ಮೈ ತಾಪಮಾನ ಹೆಚ್ಚಾಗಿದ್ದರ ಪರಿಣಾಮ ಎಲ್‌ನಿನೋ ಪ್ರಭಾವ ಆವರಿಸಿದ್ದರಿಂದ ಮಳೆ ದುರ್ಬಲವಾಗಿ ತಾಲೂಕಿನಲ್ಲಿ ಶೇ.75 ರಷ್ಟು ಬೆಳೆಗಳು ಕುಂಠಿತಗೊಂಡಿವೆ.
ಜೂನ್ 22 ರಿಂದ ಆಗುವ ಆರಿದ್ರಾ ಮಳೆಯು ಸಮರ್ಪಕವಾಗಿ ಬಾರದೇ ಹೋದರೆ ರೈತರು ನಷ್ಟ ಅನುಭವಿಸುತ್ತಾರೆ.
ಬೋರ್‌ವೆಲ್ ಮೊರೆ: ಬೆಳೆ ಉಳಿಸಿಕೊಳ್ಳಲು ರೈತರು ಬೋರ್‌ವೆಲ್ ಮೊರೆ ಹೋಗಿದ್ದಾರೆ. ಇನ್ನು ಮಳೆಯಾಶ್ರಿತ ಜಮೀನು ಹೊಂದಿದವರು ಸಂಕಷ್ಟ ಅನುಭವಿಸುವಂತಾಗಿದೆ.