ದೇಶದ ಪ್ರಗತಿಗೆ ವಿಜ್ಞಾನ- ತಂತ್ರಜ್ಞಾನದ ಶಕ್ತಿ ಅಗತ್ಯ

ರಸಾಯನಶಾಸ್ತ್ರ ವಿಜ್ಞಾನಿ ಡಾ. ನಾಗರಾಜ ಶೆಟ್ಟಿ ಅಭಿಮತ
ಹುಬ್ಬಳ್ಳಿಯಲ್ಲಿ ವಿಜಯದಶಮಿ ಅಂಗವಾಗಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ.
ಹುಬ್ಬಳ್ಳಿಯಲ್ಲಿ ವಿಜಯದಶಮಿ ಅಂಗವಾಗಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಘಟಕದ ವತಿಯಿಂದ ಏರ್ಪಡಿಸಿದ್ದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ.
Published on: 

ಹುಬ್ಬಳ್ಳಿ: ದೇಶದ ಪ್ರಗತಿಗೆ ನೈಸರ್ಗಿಕ ಸಂಪನ್ಮೂಲದ ಜತೆಗೆ ವಿಜ್ಞಾನ- ತಂತ್ರಜ್ಞಾನಗಳ ಶಕ್ತಿಯು ಅಗತ್ಯವಾಗಿದ್ದು, ರಕ್ಷಣಾ ವ್ಯವಸ್ಥೆಯಲ್ಲಿ ವೈಜ್ಞಾನಿಕ ಸಲಕರಣೆಗಳಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ರಸಾಯನಶಾಸ್ತ್ರ ವಿಜ್ಞಾನಿ ಡಾ. ನಾಗರಾಜ ಪುಂಡಲಿಕ ಶೆಟ್ಟಿ ಹೇಳಿದರು.

ಇಲ್ಲಿಯ ನೆಹರು ಮೈದಾನದಲ್ಲಿ ಭಾನುವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ವತಿಯಿಂದ ವಿಜಯದಶಮಿ ನಿಮಿತ್ತ ಏರ್ಪಡಿಸಿದ್ದ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಲಾಲ್​ ಬಹಾದ್ದೂರ ಶಾಸ್ತ್ರಿ, ಅಟಲ್​ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಸೈನಿಕರು ಹಾಗೂ ವಿಜ್ಞಾನಕ್ಕೆ ಒತ್ತು ನೀಡಲಾಯಿತು. ಪ್ರಸ್ತುತ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದಿಂದ ಸಂಶೋಧನೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜತೆಗೆ ದೇಶದ ಶಿಕ್ಷಣ, ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಭಾರತೀಯ ಸಂಶೋಧನಾ ಕ್ಷೇತ್ರದ ಸಾಧನೆ ಅಗಾಧವಾಗಿದೆ. ಮೊದಲೆಲ್ಲ ಭಾರತದಿಂದ ಕೇವಲ 42ಸಾವಿರದಷ್ಟು ಪೇಟೆಂಟ್​ ಅರ್ಜಿಗಳು ಇರುತ್ತಿದ್ದರೆ, ಈಗ 1.42 ಲಕ್ಷ ಅರ್ಜಿಗಳು ಪೇಟೆಂಟ್​ಗೆ ಹೋಗುತ್ತಿವೆ. ವಿಶ್ವದ ಅಗ್ರ ಆರು ರಾಷ್ಟ್ರಗಳಲ್ಲಿ ಭಾರತ ಸ್ಥಾನ ಪಡೆದಿದೆ ಎಂದರು.

ವಿಜಯದ ಆರಾಧನೆ: ಬೌದ್ಧಿಕ ನೀಡಿದ ಆರ್​ಎಸ್​ಎಸ್​ ಕರ್ನಾಟಕ ಉತ್ತರ ಪ್ರಚಾರ ವಿಭಾಗ ಪ್ರಮುಖ ಕೃಷ್ಣ ಜೋಶಿ, ಭಾರತವು ಎಂದಿಗೂ ವಿಜಯದ ಆರಾಧನೆ ಮಾಡುತ್ತ ಬಂದಿದೆ. ಸೋಲಿನ ಆರಾಧನೆ ಮಾಡಿಲ್ಲ. ಮಹಿಷಾಸುರ ಮದಿರ್ನಿಯಾದ ದೇವಿಯನ್ನು ವಿಜಯದಶಮಿಯಂದು ಆರಾಧಿಸುತ್ತೇವೆ. ಆದರೆ, ಕೆಲವರು ಮಹಿಷ ದಸರಾ ಆಚರಿಸುವ ಮೂಲಕ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ರಾಷ್ಟ್ರ ಪುನರುತ್ಥಾನ, ಧರ್ಮದ ಪ್ರತಿಷ್ಟಾಪನೆ ಸಲುವಾಗಿ ಆರ್​ಎಸ್​ಎಸ್​ ಕೆಲಸ ಮಾಡುತ್ತಿದೆ. ಪ್ರತಿ ಹಿಂದುವಿನಲ್ಲಿ ಹಿಂದುತ್ವದ ಜಾಗೃತಿ ಬಡಿದೆಬ್ಬಿಸುತ್ತಿದೆ. ಸಂಘ ಸ್ಥಾಪನೆಯಾಗಿ ಶತಮಾನೋತ್ಸವ ಆಚರಿಸಿದೆ. ಪ್ರತಿ ಹಿಂದುವಿನ ಮನೆಗೆ ಹೋಗಿದೆ. ಆ ಮೂಲಕ ವ್ಯಕ್ತಿ ನಿರ್ಮಾಣದ ಕೆಲಸ ಮಾಡಿದೆ ಎಂದರು.

ಇತ್ತೀಚೆಗೆ ಜಿಹಾದಿ ಮಾನಸಿಕತೆ ಉಳ್ಳವರು ಹಿಂದು ಸಮಾಜ ಒಡೆಯುವ ಕೆಲಸಕ್ಕೆ ಕೈಹಾಕುತ್ತಿದ್ದಾರೆ. ಲವ್​ ಜಿಹಾದ್​, ಮತಾಂತರ ಜಿಹಾದ್​ನಿಂದ ಮುಸ್ಲಿಂ, ಕ್ರಿಶ್ಚಿಯನ್​ರ ಜನಸಂಖ್ಯೆ ಹೆಚ್ಚಾಗುತ್ತಿದೆ. ನಮ್ಮ ಸಂವಿಧಾನ ಜೀವಂತವಾಗಿರಬೇಕಾದರೆ ಇಂತಹ ಜಿಹಾದ್​ ಮಾನಸಿಕತೆಯಿಂದ ಹೊರಬರಬೇಕು ಎಂದರು.

ಆಕರ್ಷಕ ಪಥಸಂಚಲನ: ಸಾವಿರಾರು ಗಣವೇಷಧಾರಿಗಳು ನೆಹರು ಮೈದಾನದಲ್ಲಿ ಸೇರಿ ಎರಡು ಮಾರ್ಗಗಳಲ್ಲಿ ಪಥಸಂಚಲನ ನಡೆಸಿದರು. ದಾರಿಯುದ್ದಕ್ಕೂ ರಂಗೋಲಿ ಹಾಕಲಾಗಿತ್ತು. ರಸ್ತೆ ಅಕ್ಕಪಕ್ಕ ನಿಂತು ಸಾರ್ವಜನಿಕರು ಗಣವೇಷಧಾರಿಗಳಿಗೆ ಪುಷ್ಪಮಳೆ ಗರೆದು ಸ್ವಾಗತಿಸಿದರು. ರಾಷ್ಟ್ರಭಕ್ತರ ವೇಷಭೂಷಣ ಹಾಕಿದ್ದ ಚಿಣ್ಣರು ಗಮನ ಸೆಳೆದರು.

ಮಲಕಾಜಪ್ಪ ಹಳಿಮನಿ ಪರಿಚಯಿಸಿದರು. ಗೋವಿಂದಪ್ಪ ಗೌಡಪ್ಪಗೋಳ, ಶಿವಾನಂದ ಆವಟಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net