ಕರ್ನಾಟಕ ದಕ್ಷಿಣ ಕಾನೂನು ವಿವಿ ಸ್ಥಾಪನೆ ನಿರ್ಧಾರ ಸರಿಯಲ್ಲ

ಬಸವಪ್ರಭು ಹೊಸಕೇರಿ.
ಬಸವಪ್ರಭು ಹೊಸಕೇರಿ.
Published on
ಧಾರವಾಡ: ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದಕ್ಷಿಣ ಕಾನೂನು ವಿವಿ ಸ್ಥಾಪನೆಗೆ ಸರ್ಕಾರ ನಿರ್ಧರಿಸಿರುವುದಕ್ಕೆ ಕರ್ನಾಟಕ ವಿದ್ಯಾವರ್ಧಕ ಸಂಘದ ತೀವ್ರ ಆಕ್ಷೇಪವಿದೆ ಎಂದು ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದ ಈ ತೀರ್ಮಾನವು ಕರ್ನಾಟಕ ಏಕೀಕರಣದ ಆಶಯಗಳಿಗೆ ಧಕ್ಕೆ ಉಂಟು ಮಾಡುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2009ರಲ್ಲಿ ಹು-ಧಾ ಮಧ್ಯೆದಲ್ಲಿರುವ ನವನಗರದಲ್ಲಿ ಕರ್ನಾಟಕ ರಾಜ್ಯಕಾನೂನು ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಈ ವಿಶ್ವವಿದ್ಯಾಲಯಕ್ಕೆ ರಾಜ್ಯದ 119 ಕಾನೂನುಗಳು ಸಂಲಗ್ನ ಹೊಂದಿವೆ. ಆದರೆ, ವಿಶ್ವವಿದ್ಯಾಲಯಕ್ಕೆ ಆಡಳಿತ ಭವನ, ಗ್ರಂಥಾಲಯ ಇನ್ನಿತರ ಮೂಲ ಸೌಕರ್ಯ ಸರ್ಕಾರ ಒದಗಿಸಿಲ್ಲ, ಕಾಯಂ ಉಪನ್ಯಾಸಕರ ನೇಮಕಾತಿ ಇಲ್ಲದೇ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಬೇಕಿದೆ. ಆದಾಗ್ಯೂ ವಿಶ್ವವಿದ್ಯಾಲಯ ನ್ಯಾಕ್‌ನ `ಎ` ಗ್ರೇಡ್ ಮಾನ್ಯತೆ ಹೊಂದಿದೆ ಎಂದರು.
ಪ್ರತಿವರ್ಷ ಕಾನೂನು ಪದವಿಗೆ ಪ್ರವೇಶ ಪಡೆಯುವವರ ಪ್ರಮಾಣ ಕೂಡ ಹೆಚ್ಚಳವಾಗಿದೆ. ಆದರೆ, ಸರ್ಕಾರ ಈವರೆಗೂ ವಿಶ್ವವಿದ್ಯಾಲಯಕ್ಕೆ ಅಗತ್ಯ ನೆರವು ಒದಗಿಸಲು ಆಸಕ್ತಿ ತೋರಿಸುತ್ತಿಲ್ಲ. ಈಗಾಗಲೇ ಬೆಂಗಳೂರಲ್ಲಿ ರಾಷ್ಟ್ರೀಯ ಕಾನೂನು ಕಾಲೇಜು ಇದೆ. ಜತೆಗೆ 10ಕ್ಕೂ ಅಧಿಕ ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಬೆಂಗಳೂರಿನಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಆರಂಭಿಸಲು ಅಗತ್ಯ ಸೌಕರ್ಯಗಳ ಮಾಹಿತಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗೆ ಪತ್ರ ಬರೆದಿರುವುದು ಸರಿಯಲ್ಲ ಎಂದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರು ಭಾಗಗಳಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಕಾರಣದಿಂದ ಬೆಂಗಳೂರು ಮತ್ತು ಮೈಸೂರು ಮಾತ್ರ ಅಭಿವೃದ್ಧಿ ಹೊಂದುತ್ತಿವೆ. ಸರ್ಕಾರದ ಅಸಡ್ಡೆಯಿಂದ ಉತ್ತರ ಕರ್ನಾಟಕ ಇನ್ನಿತರ ಭಾಗಗಳು ಅಭಿವೃದ್ಧಿ ಮತ್ತು ಮೂಲ ಸೌಕರ್ಯಗಳಿಂದ ವಂಚಿತವಾಗುತ್ತ ಸಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೊಸ ವಿವಿ ಸ್ಥಾಪನೆಯಿಂದ ಈಗಿರುವ ಧಾರವಾಡದ ವಿಶ್ವವಿದ್ಯಾಲಯವು ಸರ್ಕಾರದ ಮತ್ತಷ್ಟು ನಿರ್ಲಕ್ಷ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಜತೆಗೆ ಈ ಭಾಗದ ಅಭಿವೃದ್ಧಿ ನಿರ್ಲಕ್ಷ್ಯ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಸರ್ಕಾರ ಈ ತೀರ್ಮಾನದಿಂದ ಹಿಂದೆ ಸರಿಯಬೇಕು. ರಾಜ್ಯ ಕಾನೂನು ವಿವಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಈ ಕುರಿತು ಸಧ್ಯದಲ್ಲಿಯೇ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಆದಾಗ್ಯೂ ಸರ್ಕಾರ ತೀರ್ಮಾನ ಬದಲಿಸದಿದ್ದರೆ ಸಂಘವು ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಡಾ. ಧನವಂತ ಹಾಜವಗೋಳ, ಡಾ. ಜಿನದತ್ತ ಹಡಗಲಿ, ಗುರು ಹಿರೇಮಠ, ವೀರಣ್ಣ ಒಡ್ಡೀನ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net