ಧಾರವಾಡ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ನಮ್ಮ ಜೀವನವನ್ನು ಸರಳೀಕರಣಗೊಳಿಸಿ, ಅರ್ಥಪೂರ್ಣವಾಗಿಸಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಧಾರವಾಡದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರಲ್ಲಿ ಜಾಗೃತಿಗೊಳಿಸುವ ಉದ್ದೇಶದಿಂದ ನಗರದ ಡಾ. ಬಿ.ಆರ್. ಅಂಬೇಡ್ಕರ್ ಪಾರಂಪರಿಕ ಕಟ್ಟಡ ಆವರಣದ ಜ್ಞಾನ ಬುದ್ಧ ವಿಹಾರ (ಬುದ್ಧ ರಕ್ಕಿಥ ಪ್ರೌಢಶಾಲೆ ಆವರಣ) ದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಭೀಮ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಬುದ್ಧ ವಿಹಾರ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಇತಿಹಾಸದ ಒಂದು ಭಾಗವಾಗಿದ್ದಾರೆ. ಇದು ವಸತಿ ಶಾಲೆ ಆಗಿರುವುದರಿಂದ ಒಂದು ಮೌಲ್ಯ ಹೊಂದಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಹೆಚ್ಚಿನ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಽಸಬೇಕು. ಶಾಲೆ ಬೆಳವಣಿಗೆಗೆ ಸರ್ಕಾರ ಕೂಡ ಪ್ರಾಮುಖ್ಯತೆ ನೀಡಿದೆ. ಈ ಶಾಲೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಟ್ರಸ್ಟಿಗಳಾದ ಸಂತೋಷ ಜಕ್ಕಪ್ಪನವರ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಶಾಲೆ ಸ್ಥಾಪನೆಗೆ ಬಹಳಷ್ಟು ಶ್ರಮ ವಹಿಸಿದ್ದರು. ಮಾತೋಶ್ರೀ ರಮಾಬಾಯಿ ಅವರು ತಮ್ಮ ಆಭರಣಗಳನ್ನು ಮಾರಿ ವಿದ್ಯಾರ್ಥಿಗಳಿಗೆ ಊಟ ತಯಾರಿಸಿ ಬಡಿಸಿದರು. ಈ ಶಾಲೆಯಲ್ಲಿ ಭೀಮ ಗಾಯನ ಕಾರ್ಯಕ್ರಮ ನಡೆಯುತ್ತಿರುವ ಸಂತಸದ ವಿಷಯ ಎಂದರು.
ಬುದ್ಧ ರಕ್ಕಿಥ ವಸತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಕೆ.ಹಲಗಿ ಮಾತನಾಡಿದರು. ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಸಿಇಒ ಭುವನೇಶ ಪಾಟೀಲ ಅವರು ಸಂವಿಧಾನ ಪೀಠಿಕೆ ಭೋದಿಸಿದರು. ಸಿದ್ಧಾರ್ಥ ಯುವ ಕ್ರೀಡಾ ಸಾಂಸ್ಕೃತಿಕ ಅಭಿವೃದ್ಧಿ ಸಂಘದ ಕಲಾವಿದರು ಅಂಬೇಡ್ಕರ್ ಅವರ ವಿಚಾರಧಾರೆಗಳ ಕುರಿತು ಗಾಯನ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.
ಎಸ್ಪಿ ಗುಂಜನ್ ಆರ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಬಿ. ಸಣ್ಣೇರಿ, ಮುದುಕೇಶ ಮಾದರ, ಅರ್ಜುನ ಕಟ್ಟಿಮನಿ, ಮಮತಾ, ವಿಕ್ರಮ ಹೊಸಮನಿ ಇತರರಿದ್ದರು. ಬಿಇಒ ರಾಮಕೃಷ್ಣ ಸದಲಗಿ ಸ್ವಾಗತಿಸಿದರು. ಬಸವರಾಜ ಚಿಕ್ಕೂರ ನಿರೂಪಿಸಿದರು. ನಾಗಪ್ಪ ಮಾದರ ವಂದಿಸಿದರು.