ತಹಸೀಲ್ದಾರ್​ ಸಚ್ಚಿದಾನಂದಗೆ ನ್ಯಾಯಾಂಗ ಬಂಧನ

ಸಚ್ಚಿದಾನಂದ ಕುಚನೂರ
ಸಚ್ಚಿದಾನಂದ ಕುಚನೂರ
Published on
ಧಾರವಾಡ: ಜಮೀನಿನ ಬ ಖರಾಬು ಬದಲಾವಣೆ ಮಾಡಿ ಕೊಡಲು 50 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಧಾರವಾಡ ತಹಸೀಲ್ದಾರ್​ ಸಚ್ಚಿದಾನಂದ ಕುಚನೂರ ಅವರನ್ನು ಗುರುವಾರ ನಗರದ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಾಗಲಕೋಟೆ ಜಿಲ್ಲೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವರು ಧಾರವಾಡದ ಯರಿಕೊಪ್ಪ ಬಳಿ ಜಮೀನು ಖರೀದಿಸಿದ್ದರು. ಜಮೀನಿನ "ಬ' ಖರಾಬು ಬದಲಾವಣೆ ಮಾಡಿಕೊಡಲು ತಹಶೀಲ್ದಾರ್​ ಸಚ್ಚಿದಾನಂದ 1 ಕೋಟಿ ರೂಪಾಯಿ ಹಾಗೂ 1 ಎಕರೆ ಜಮೀನು ಕೊಡುವಂತೆ ಮಾಲೀಕನಿಗೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಜಮೀನು ಮಾಲೀಕ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಜಮೀನು ಮಾಲೀಕ ಮಂಜುನಾಥ ತಹಸೀಲ್ದಾರ್​ ಸಚ್ಚಿದಾನಂದ ಅವರನ್ನು ನಗರದ ಕೆಸಿಡಿ ಮೈದಾನಕ್ಕೆ ಕರೆಸಿದ್ದರು. ಮುಂಗಡವಾಗಿ 50 ಲಕ್ಷ ರೂ. ಹಣ ಪಡೆದ ತಹಸೀಲ್ದಾರ್​ ತಮ್ಮ ಕಾರ್​ನಲ್ಲಿ ಇಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಹಣ ಸಮೇತ ಸಚ್ಚಿದಾನಂದ ಅವರನ್ನು ವಶಕ್ಕೆ ಪಡೆದಿದ್ದರು. ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು.
ತಹಸೀಲ್ದಾರ್​ ಸಚ್ಚಿದಾನಂದ ಅವರನ್ನು ಗುರುವಾರ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಲೋಕಾಯುಕ್ತ ಎಸ್​ಪಿ ಸಿದ್ದಲಿಂಗಪ್ಪ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net