ಹುಬ್ಬಳ್ಳಿ: Teachers Workshop ಬೌದ್ಧಿಕ ಮಟ್ಟದಲ್ಲಿ ಮಾತ್ರ ಅಂಕ ಗಳಿಸಿದರೆ ಸಾಲದು, ಮಗುವಿನ ಸರ್ವಾಂಗೀಣ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ನೆರವಾಗಬೇಕು, ಇದಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದು ಧಾರವಾಡ ರಾಷ್ಟ್ರೊತ್ಥಾನ ವಿದ್ಯಾಕೇಂದ್ರ ಸಂಸ್ಕತ ಪ್ರಾಧ್ಯಾಪಕ ವಿದ್ವಾನ್ ವಿನಾಯಕ ಭಟ್ ಶೇಡಿಮನೆ ಹೇಳಿದರು.
ರಾಷ್ಟ್ರೊತ್ಥಾನ ಪರಿಷತ್ ಪ್ರಶಿಕ್ಷಣಭಾರತಿ ಹಾಗೂ ಇಲ್ಲಿಯ ಐಬಿಎಂಆರ್ ಬಿ.ಇಡಿ ಕಾಲೇಜಿನ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ತರಬೇತಿ ಕಾರ್ಯಾಗಾರದಲ್ಲಿ ಅವರು ಉಪನ್ಯಾಸ ನೀಡಿದರು.
ಅಧ್ಯಾಪಕರಿಗೆ ಅಹಂ ಇರಬಾರದು. ಮಗುವು ಶಾರೀರಿಕವಾಗಿ ಚೆನ್ನಾಗಿರಬೇಕು ಎಂಬುದನ್ನು ಕಲಿಸಬೇಕು. ಶಾರೀರಿಕ ವಿಕಾಸದೊಂದಿಗೆ ಬೌದ್ಧಿಕ ಅಭಿವೃದ್ಧಿಯಾಗಬೇಕು. ಉತ್ತಮ ಆಹಾರ ಸೇವನೆಯಿಂದ ದೌರ್ಬಲ್ಯ ದೂರ ಮಾಡಬಹುದು ಎಂದರು.
ಯುವಾ ಬ್ರಿಗೇಡ್ ರಾಜ್ಯ ಪ್ರಕಲ್ಪ ಪ್ರಮುಖ ಕಿರಣ್ ರಾಮ್, ಇಂದಿನ ಕಾಲದಲ್ಲಿ ಅಂಕ ಗಳಿಕೆಗಿಂತ ಮಕ್ಕಳಿಗೆ ಸಂಸ್ಕಾರ ನೀಡುವುದು ಮುಖ್ಯವಾಗಿದೆ. ಕೌಶಲ ಬೆಳೆಸಿದರೆ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು. ಹಾಗಾಗಿ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು ಎಂದರು.
ಪ್ರಶಿಕ್ಷಣಭಾರತಿ ಧಾರವಾಡ ಜಿಲ್ಲೆಯ ಸಂಯೋಜಕ ಮಹೇಶ ಬಿ. ಮಾತನಾಡಿ, ಮಗುವಿನ ವ್ಯಕ್ತಿತ್ವ ರಚನೆಯ ಜತೆ ಒಳ್ಳೆಯ ದೇಶ ನಿರ್ಮಾಣ ಮಾಡುವುದೇ ಶಿಕ್ಷಣ ಹಾಗೂ ಶಿಕ್ಷಕರ ಪ್ರಮುಖ ಗುರಿಯಾಗಬೇಕು ಎಂದರು.
ಕೆಎಲ್ಇ ತಾಂತ್ರಿಕ ವಿವಿ ಸಹಾಯಕ ಪ್ರಾಧ್ಯಾಪಕ ಶಿವಾನಂದಗೌಡ ಪಾಟೀಲ, ಪಕ್ಷಿ ತಜ್ಞ ಪ್ರಕಾಶ ಗೌಡರ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಶಂಕರ ಚಕ್ರವರ್ತಿ, ಸ್ವಸ್ಥ, ಸುಸ್ಥಿರ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಅಗತ್ಯವಾಗಿದೆ. ದೇಶ ರಕ್ಷಣೆಯಲ್ಲಿ ಸೈನಿಕರು ಪ್ರಮುಖ ಪಾತ್ರ ವಹಿಸಿದಂತೆ ಜಗತ್ತಿನ ಅಂಧಕಾರ ದೂರ ಮಾಡಿ ಒಳ್ಳೆಯ ಸಂಸ್ಕಾರ ನೀಡಲು ಉತ್ತಮ ಶಿಕ್ಷಕರ ಅಗತ್ಯವಿದೆ ಎಂದರು.