ಹುಬ್ಬಳ್ಳಿ: ಮಕ್ಕಳಿಗೆ ನಾವು ಏನನ್ನು ಬೋಧನೆ ಮಾಡುತ್ತೇವೆಯೋ ಅವುಗಳನ್ನೇ ಕಲಿಯುತ್ತಾರೆ. ಹಾಗಾಗಿ ಚಿಕ್ಕ ವಯಸ್ಸಿನಲ್ಲಿ ಪಾಲಕರು ಮತ್ತು ಶಿಕ್ಷಕರು ಸಂಸ್ಕಾರಯುತ ಬೋಧನೆ ಮಾಡಬೇಕು (taksh) ಎಂದು ಉದ್ಯಮಿ ರಮೇಶ ಮಹಾದೇವಪ್ಪನವರ ಅಭಿಪ್ರಾಯಪಟ್ಟರು.
ಇಲ್ಲಿಯ ಉಣಕಲ್‌ನ ಸಿದ್ದಕಲ್ಯಾಣ ನಗರದ ಜ್ಞಾನದ ಎಜುಕೇಷನ್ ಸೊಸೈಟಿಯ ತಕ್ಷ್ ಪ್ರೀ-ಸ್ಕೂಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 4ನೇ ವಾರ್ಷಿಕೋತ್ಸವ (ನಿಸರ್ಗ) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಮನೆಯೇ ಪಾಠ ಶಾಲೆ. ನಂತರ ಶಾಲೆಗೆ ಆಗಮಿಸಿ ಜ್ಞಾನ ಭಂಡಾರದಲ್ಲಿ ಪಯಣಿಸುತ್ತಾರೆ. ಈ ಪ್ರಯಾಣದಲ್ಲಿ ಅದೆಷ್ಟೋ ಮಕ್ಕಳು ಯಶಸ್ಸಿನ ಮೈಲಿಗಲ್ಲು ಸ್ಥಾಪಿಸುತ್ತಾರೆ ಎಂದರು.
ನಿವೃತ್ತ ಅಧಿಕಾರಿ ಹನುಮಂತಪ್ಪ ಕುಸುಗಲ್ ಮಾತನಾಡಿ, ತಕ್ಷ್ ಸ್ಕೂಲ್ ಮಕ್ಕಳಿಗೆ ಉತ್ತಮ ಬೋಧನೆ ಮತ್ತು ಸಂಸ್ಕಾರ ಕಲಿಸುತ್ತದೆ. ಅವರು ಇಂದು ಅತಿಥಿಗಳನ್ನು ಸ್ವಾಗತಿಸಿದ ರೀತಿಯೇ ನಮಗೆ ಎಲ್ಲ ರೀತಿಯಲ್ಲಿಯೂ ಹೇಳಿಕೊಟ್ಟಿದೆ ಎಂದರು.
ಸೊಸೈಟಿ ಚೇರ್ಮನ್ ಮನ್ಮೀತ್‌ಸಿಂಗ್ ಕೊಹ್ಲಿ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳು ಲೇಜಿಮ್ ನೃತ್ಯದೊಂದಿಗೆ ಗಣ್ಯರನ್ನು ವೇದಿಕೆಗೆ ಕರೆತಂದರು. ವಿವಿಧ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಬಡಾವಣೆಯ ಹಿರಿಯರನ್ನು ಸನ್ಮಾನಿಸಲಾಯಿತು.
ಉದ್ಯಮಿ ಶಾಂತಿಲಾಲ್ ಪಟೇಲ್, ಹಿರಿಯ ಕಲಾವಿದ ಅಶೋಕ ಬೆಳ್ಳಿಗಟ್ಟಿ, ಮುಖ್ಯಗುರುಮಾತೆ ಅಪರ್ಣಾ ಕೊಹ್ಲಿ, ಶಾಲೆ ಕಾರ್ಯದರ್ಶಿ ಸಾವಿತ್ರಿ ಕೋರಿಕೊಪ್ಪ, ಸಂಯೋಜಕಿ ಶ್ರೀದೇವಿ ಸುಗಂಧಿ, ಶಿಕ್ಷಕಿಯರಾದ ಸುನಿತಾ, ಕಾವ್ಯ, ಗಾಯತ್ರಿ, ಸಹನಾ, ಸಿಬ್ಬಂದಿ ವಿದ್ಯಾ, ರತ್ನಾ, ಯಲ್ಲಮ್ಮ ಇತರರು ಇದ್ದರು.