ನೀರಿನ ಅಭಾವವಾಗದಂತೆ ಮುನ್ನಚ್ಚರಿಕೆ ವಹಿಸಿ

ಕುಡಿಯುವ ನೀರಿನ ಕ್ರಿಯಾ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ
ಕುಡಿಯುವ ನೀರಿನ ಕ್ರಿಯಾ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ
Published on
ಧಾರವಾಡ: ಬೇಸಿಗೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ತಹಸೀಲ್ದಾರ್ ಮತ್ತು ಪಿಡಿಒ ಅವರು ಕುಡಿಯುವ ನೀರಿನ ಅಭಾವ ಉಂಟಾಗದಂತೆ ಮುನ್ನಚ್ಚರಿಕೆ ವಹಿಸಬೇಕು. ಪ್ರಸ್ತುತ ಜಿಲ್ಲೆಯ ಎಂಟು ಗ್ರಾಮಗಳಲ್ಲಿ ಬಾಡಿಗೆ ಆಧಾರದಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಽಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಬಗ್ಗೆ ಕೈಗೊಂಡ ಕ್ರಿಯಾ ಯೋಜನೆ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು. ಧಾರವಾಡ ತಾಲೂಕಿನ ಹೊಸಟ್ಟಿ, ಮಂಡಿಹಾಳ, ಬೇಲೂರ ಮತ್ತು ಮುಗದ ಗ್ರಾಮ, ಹುಬ್ಬಳ್ಳಿ ತಾಲೂಕಿನ ನೂಲ್ವಿ ಮತ್ತು ಅದರಗುಂಚಿ ಗ್ರಾಮ ಹಾಗೂ ಕಲಘಟಗಿ ತಾಲೂಕಿನ ನೆಲ್ಲಿಹರವಿ ತಾಂಡಾ ಮತ್ತು ಬಿ. ಹುಲಿಕಟ್ಟಿ ಗ್ರಾಮ ಸೇರಿ ಒಟ್ಟು ಎಂಟು ಗ್ರಾಮಗಳಲ್ಲಿ ಎಂಟು ಖಾಸಗಿ ಬೊರವೆಲ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 395 ಗ್ರಾಮಗಳಿದ್ದು, ಈ ಪೈಕಿ 90 ಗ್ರಾಮಗಳಲ್ಲಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಅಭಾವ ಉಂಟಾದಲ್ಲಿ ಆಯಾ ಗ್ರಾಮಗಳಲ್ಲಿ ಲಭ್ಯವಿರುವ ಖಾಸಗಿ ಬೊರವೆಲ್‌ಗಳನ್ನು ಗುರುತಿಸಿ, ಮುನ್ನಚ್ಚರಿಕೆ ಕ್ರಮವಾಗಿ 186 ಖಾಸಗಿ ಕೊಳವೆಬಾವಿಗಳ ಮಾಲಿಕರೊಂದಿಗೆ ನೀರು ಪಡೆಯಲು ಒಪ್ಪಿಗೆ ಪತ್ರ ಮಾಡಿಕೊಳ್ಳಲಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಅಗತ್ಯವಿದ್ದಲ್ಲಿ ತುರ್ತು ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಬೇಸಿಗೆ ಕಾಲದಲ್ಲಿ ನೀರಿನ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಜಿಲ್ಲೆಯ ಎಲ್ಲ ಕುಡಿಯುವ ನೀರಿನ ಕೆರೆಗಳನ್ನು ಈಗಾಗಲೇ ತುಂಬಿಸಲಾಗಿದೆ. ಇವು ಕಲುಷಿತವಾಗದಂತೆ ಹಾಗೂ ಕೃಷಿ ಅಥವಾ ಇತರ ಕಾರ್ಯಚಟುವಟಿಕೆಗಳಿಗೆ ಕೆರೆಯ ನೀರು ಬಳಸದಂತೆ ಎಚ್ಚರಿಕೆ ವಹಿಸಬೇಕು. ಪ್ರಾಣಿ ಮತ್ತು ಪಕ್ಷಿಗಳಿಗೂ ನೀರಿನ ಕೊರತೆ ಆಗದಂತೆ ವಿಶೇಷ ಗಮನ ಹರಿಸಬೇಕು ಎಂದರು.
ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ವಿಪತ್ತಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ತಕ್ಷಣ ಸಂಪರ್ಕಿಸಿ, ಪರಿಹರಿಸಿಕೊಳ್ಳಲು ಅನುಕೂಲವಾಗುವಂತೆ ಸಾರ್ವಜನಿಕರ ಸಹಾಯಕ್ಕಾಗಿ ಜಿಲ್ಲಾ ಪಂಚಾಯಿತಿಯಲ್ಲಿ ಹಾಗೂ ಎಲ್ಲ ತಾಲೂಕು ಪಂಚಾಯಿತಿಗಳಲ್ಲಿ ಸಹಾಯವಾಣಿಗಳನ್ನು ಆರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತಕ್ಷಣ ಸ್ಪಂದಿಸಲು ಮತ್ತು ಜಿಲ್ಲಾ ಪಂಚಾಯತಿಗೆ ಈ ಕುರಿತು ವರದಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಸಭೆಗೆ ತಿಳಿಸಿದರು.
ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಪ್ರೊಬೇಷನರಿ ಐಎಎಸ್ ಅಽಕಾರಿ ರೀತಿಕಾ ವರ್ಮಾ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಇದ್ದರು. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮಾಲೋಚಕ ವೆಂಕಟೇಶ ಬುಳ್ಳಾ ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.
ಅಜೀಜ್ ದೇಸಾಯಿ, ಮಲ್ಲಿಕಾರ್ಜುನ ತೊದಲಬಾಗಿ, ಶಾಲಂ ಹುಸೇನ್, ಮಂಜುನಾಥ ಅಂತರವಳ್ಳಿ, ಆರ್.ಎಂ. ಸೊಪ್ಪಿಮಠ, ಜಗದೀಶ ಪಾಟೀಲ, ಡಾ. ಪ್ರಕಾಶ ಬೆನ್ನೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net