ಕೆಪಿಎಸ್ ಸಿ ಭ್ರಷ್ಟಾಚಾರ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಓ) ನಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಧಾರವಾಡ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ)ದ ಎಲ್ಲ ಭ್ರಷ್ಟಾಚಾರದ ಆರೋಪಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ, ಆಲ್ ಇಂಡಿಯಾ ಡೆಮೊಕ್ರೆಟಿಕ್ ಯೂತ್ ಆರ್ಗನೈಜೇಷನ್ (ಎಐಡಿವೈಓ) ನಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.
ಕೆಪಿಎಸ್ಸಿಯಲ್ಲಿ ಪದೇ ಪದೆ ಬೆಳಕಿಗೆ ಬರುತ್ತಿರುವ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಅವ್ಯವಹಾರಗಳು ಹಾಗೂ ವಿಳಂಬಗಳಿಂದ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳ ಭವಿಷ್ಯ ಸಂಕಷ್ಟಕ್ಕೀಡಾಗಿದೆ. ಪಾರದರ್ಶಕ ಹಾಗೂ ನ್ಯಾಯಸಮ್ಮತ ನೇಮಕಾತಿ ವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಲಕ್ಷಾಂತರ ಯುವಜನರ ಕನಸುಗಳಿಗೆ ಬೆಳಕಾಗಬೇಕಿದ್ದ ಕೆಪಿಎಸ್ಸಿ, ಪ್ರಸ್ತುತ ಒಂದರ ಹಿಂದೆ ಒಂದರಂತೆ ಹೊರಬರುತ್ತಿರುವ ಅಕ್ರಮಗಳಿಂದ ಪ್ರಶ್ನಾರ್ಹವಾಗಿದೆ. 1998&99ರ ನೇಮಕಾತಿ ವಿವಾದಗಳಿಂದ ಆರಂಭವಾಗಿ, 2011ರ ಪರೀಕ್ಷಾ ಅಕ್ರಮಗಳು, 2014ರ ಎಫ್ಡಿಎ ಪ್ರಶ್ನೆಪತ್ರಿಕೆ ಸೋರಿಕೆ, 2019ರ ಅಂಕಗಳ ತಿರುಚುವಿಕೆಯ ಆರೋಪಗಳು, ಇತ್ತೀಚಿನ ವರ್ಷಗಳಲ್ಲಿ ಪಿಡಿಓ ನೇಮಕಾತಿಯಲ್ಲಿ ಅಕ್ರಮಗಳು ನಡೆದಿವೆ.
ಕೆಎಎಸ್ ಪರೀಕ್ಷೆಯಲ್ಲಿ ಪ್ರಿಲಿಮಿನರಿ ಹಾಗೂ ಮುಖ್ಯ ಪರೀಕ್ಷೆಗಳಲ್ಲಿ ಲೋಪಗಳಾಗಿವೆ. ಕೆಪಿಎಸ್ಸಿ ಅಧ್ಯಕ್ಷರ ಸ್ವಜನ ಪಕ್ಷಪಾತ, ಪಶು ವೈದ್ಯಾಧಿಕಾರಿಗಳ ನೇಮಕದಲ್ಲಿ ಅವ್ಯವಹಾರ ಸೇರಿ ಪ್ರತಿಯೊಂದು ಪರೀಕ್ಷೆಗಳಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಂತಾಗಿದೆ. ಇದು ಉದ್ಯೋಗಾಕಾಂಕ್ಷಿಗಳ ನಂಬಿಕೆ ಅಲುಗಾಡಿಸಿವೆ.
ಕೂಡಲೇ ಕೆಪಿಎಸ್ಸಿಯ ಸಮಗ್ರ ಸುಧಾರಣೆಗೆ ಮುಂದಾಗಬೇಕು. ವಿಷಯ ತಜ್ಞರನ್ನು ಕೆಪಿಎಸ್ಸಿ ಅಧ್ಯಕ್ಷರ, ಸದಸ್ಯರ ಆಯ್ಕೆಯ ಪ್ರಕ್ರಿಯೆಯಲ್ಲಿ ಪರಿಗಣಿಸಬೇಕು. ಕೆಪಿಎಸ್ಸಿಯ ಎಲ್ಲ ಹಂತದ ಸಿಬ್ಬಂದಿಯನ್ನು ನಿಯಮಿತವಾಗಿ ಬದಲಾಯಿಸಬೇಕು. ಉದ್ಯೋಗಾಕಾಂಕ್ಷಿಗಳ ಹಿತಾಸಕ್ತಿ ರಕ್ಷಿಸಲು ಖಾಲಿ ಹುದ್ದೆಗಳನ್ನು ಕೂಡಲೇ ಭತಿರ್ ಮಾಡಬೇಕು. ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಭೂಮಾಪಕರ ನೇಮಕಾತಿಗಳ ನಿರ್ವಹಣೆಯನ್ನು ಕೆಪಿಎಸ್ಸಿಯಿಂದ ಕೆಇಎಗೆ ವಹಿಸುವುದಕ್ಕೂ ಮುನ್ನ ಅಭ್ಯಥಿರ್ಗಳಿಂದ ಕೆಪಿಎಸ್ಸಿ ಸಹ ಅಜಿರ್ ಶುಲ್ಕ ಸಂಗ್ರಹಿಸಿದ್ದು, ಅದನ್ನು ಅಭ್ಯಥಿರ್ಗಳಿಗೆ ಮರುಪಾವತಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಸಮಿತಿಯ ಜಿಲ್ಲಾ ಸಂಚಾಲಕ ವೀರೇಶ ನರೇಗಲ್, ಜಿಲ್ಲಾ ಸಹಸಂಚಾಲಕ ಪುನೀತ್ ಹೊನ್ನಣ್ಣವರ, ಯಲ್ಲಪ್ಪ ದೊರೆ, ಮಲ್ಲೇಶ್ ಚೌಹ್ವಾಣ, ಅಮೃತ ಕೊಂಡಿಕೊಪ್ಪ, ಅರುಣಕುಮಾರ್ ಕವಿತಾಳ, ಶರಣಪ್ಪ ಕಡೆಯವರ, ಶರಣಬಸವ ದೇಸಾಯಿ, ಸಂತೋಷ ವಿಭೂತಿ, ಶಿವಪ್ಪ, ಹನುಮಂತ ಇತರರಿದ್ದರು.