ಬಾಗಿಲು ತೆರೆಯದ ಈಜುಕೊಳ- ಕ್ರೀಡಾ ಸಂಕೀರ್ಣ

ಧಾರವಾಡದ ಸುಸಜ್ಜಿತ ಈಜುಕೊಳ- ಕ್ರೀಡಾ ಸಂಕೀರ್ಣ.
ಧಾರವಾಡದ ಸುಸಜ್ಜಿತ ಈಜುಕೊಳ- ಕ್ರೀಡಾ ಸಂಕೀರ್ಣ.
Published on
ಮಂಜುನಾಥ ಎಸ್​. ಅಂಗಡಿ ಧಾರವಾಡ
ವಿದ್ಯಾಕಾಶಿ ಧಾರವಾಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸಂಕೀರ್ಣ ಮತ್ತು ಈಜುಕೊಳ ನಿರ್ಮಾಣ ದಶಕದ ಬೇಡಿಕೆಯಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಮುತುವರ್ಜಿಯಿಂದ ಸುಸಜ್ಜಿತ ಕ್ರೀಡಾ ಸಂಕೀರ್ಣ ನಿರ್ಮಾಣಗೊಂಡಿದೆ. ಮಾರ್ಚ್​ನಲ್ಲೇ ಲೋಕಾರ್ಪಣೆಗೊಂಡಿರುವ ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ ಈವರೆಗೂ ಬಾಗಿಲು ತೆರೆದಿಲ್ಲ.
ಜಿಲ್ಲೆಯ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಿ.ಸಿ. ಕಾಂಪೌಂಡ್​ ಪಕ್ಕ ಈಜುಕೊಳ ಮತ್ತು ಕ್ರೀಡಾ ಸಂಕೀರ್ಣ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಪ್ರಸ್ತಾವನೆ ಮೇರೆಗೆ ಎನ್​ಎಂಡಿಸಿ ಮತ್ತು ಒಎನ್​ಜಿಸಿ ಕಂಪನಿಗಳ ಸಿಎಸ್​ಆರ್​ ಅಡಿ ಸುಮಾರು 52 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕ್ರೀಡಾ ಸಂಕೀರ್ಣ ನಿರ್ಮಾಣಗೊಂಡಿದೆ. ಅಂತಾರಾಷ್ಟ್ರೀಯ ಮಟ್ಟದ ಮಾನದಂಡಗಳೊಂದಿಗೆ ಇದು ತಲೆಎತ್ತಿದೆ.
ಸುಮಾರು 46 ಗುಂಟೆ ಜಾಗದಲ್ಲಿ ನಿರ್ಮಾಣಗೊಂಡ 2 ಅಂತಸ್ತಿನ ಕ್ರೀಡಾ ಸಂಕೀರ್ಣದಲ್ಲಿ ವಿವಿಧ ಕ್ರೀಡಾ ಚಟುವಟಿಕೆಗೆ ಅವಕಾಶವಿದೆ. ಕಬಡ್ಡಿ, ಕುಸ್ತಿ, ಟೆಕ್ವಾಂಡೋ, ಕರಾಟೆ, ಜಿಮ್​ ಸೇರಿ ಹಲವು ಕ್ರೀಡಾ ಅಂಕಣಗಳಿವೆ. 2 ಟೇಬಲ್​ ಟೆನ್ನಿಸ್​ ಅಂಕಣಗಳಿವೆ. 2ನೇ ಮಹಡಿಯಲ್ಲಿ 4 ಬ್ಯಾಡ್ಮಿಂಟನ್​ ಕೋರ್ಟ್​ಗಳಿವೆ. ಎರಡೂ ಮಹಡಿಗಳಲ್ಲಿ ತಲಾ 50 ಜನರಿಗೆ ಪಂದ್ಯ ನೋಡಲು ವೀಕ್ಷಕರ ಗ್ಯಾಲರಿಗಳಿವೆ. ಎರಡೂ ಮಹಡಿಗಳಲ್ಲಿ ಕ್ರೀಡಾಪಟುಗಳ ವಿಶ್ರಾಂತಿ ಕೊಠಡಿ, ರೆಸ್ಟ್​ರೂಂ ವ್ಯವಸ್ಥೆ ಇದೆ. ಸುಮಾರು 40 ಟೇಬಲ್​ಗಳ ಕ್ಯಾಂಟಿನ್​ ನಿರ್ಮಾಣಕ್ಕೆ ಸ್ಥಳ ಮೀಸಲಿಡಲಾಗಿದೆ. ಈಜುಕೊಳದ ಪಕ್ಕ 10 ಮೀ. ಶೂಟಿಂಗ್​ ಅಂಕಣವಿದೆ.
* ಅಂತಾರಾಷ್ಟ್ರೀಯ ವಿನ್ಯಾಸ:
ಅಂತಾರಾಷ್ಟ್ರೀಯ ವಿನ್ಯಾಸದ 50 ಮೀಟರ್​ ಉದ್ದದ ಈಜುಕೊಳದದಲ್ಲಿ 5 ಡೈವಿಂಗ್​ ಬೋರ್ಡ್​ಗಳಿವೆ. ಅನುಭವಿ ತರಬೇತುದಾರರಿಂದ ಈಜುಪಟುಗಳಿಗೆ ತರಬೇತಿ ಕೊಡಿಸುವ ಉದ್ದೇಶ ಹೊಂದಲಾಗಿದೆ. ಈ ಭಾಗದ ಈಜುಪಟುಗಳು ಇಲ್ಲಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಾರವಾಡಕ್ಕೆ ಕೀತಿರ್ ತರಲು ಇದು ವೇದಿಕೆಯಾಗಲಿದೆ.
ಉದ್ಘಾಟನೆಯಾಗಿ ಮೂರುವರೆ ತಿಂಗಳಾದರೂ ಅಂತಾರಾಷ್ಟ್ರೀಯ ಈಜುಕೊಳವನ್ನು ಆರಂಭಿಸಿ ಅದರ ನಿರ್ವಹಣೆಯನ್ನು ಸ್ಪೋರ್ಟ್ಸ್​ ಅಕಾಡೆಮಿಗಳಿಗೆ ನೀಡುವ ಇಚ್ಚಾಶಕ್ತಿಯನ್ನು ಜಿಲ್ಲಾಡಳಿತ ತೋರಲಿಲ್ಲ. ಸ್ಪೋರ್ಟ್ಸ್​ ಕಾಂಪ್ಲೆಕ್ಸ್​ನ ನಿರ್ವಹಣೆ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲು 3 ತಿಂಗಳ ಕಾಲಹರಣ ಮಾಡಲಾಗಿದೆ. ಕೊನೆಗೂ ಎಚ್ಚೆತ್ತ ಜಿಲ್ಲಾಡಳಿತ ಇತ್ತೀಚೆಗೆ ನಿರ್ವಹಣೆಗಾಗಿ ಸ್ಪೋರ್ಟ್ಸ್​ ಅಕಾಡೆಮಿ, ಅಸೋಸಿಯೇಷನ್​ಗಳಿಂದ ಅರ್ಜಿ ಆಹ್ವಾನಿಸಿದೆ. ಈ ಪ್ರಕ್ರಿಯೆ ಮುಗಿಯಲು ಕನಿಷ್ಠ ಒಂದು ತಿಂಗಳಾದರೂ ಬೇಕು.
"

ಧಾರವಾಡದ ಈಜುಕೊಳ- ಕ್ರೀಡಾ ಸಂಕೀರ್ಣದಲ್ಲಿ ಕೆಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಕ್ರೀಡಾ ಚಟುವಟಿಕೆಗಳ ಆರಂಭ ವಿಳಂಬವಾಗಿದೆ. ಕ್ರೀಡಾ ಸಂಕೀರ್ಣದ ನಿರ್ವಹಣೆಗಾಗಿ ಆಸಕ್ತ ಸ್ಪೋರ್ಟ್ಸ್​ ಅಕಾಡೆಮಿ- ಅಸೋಸಿಯೇಷನ್​ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಪ್ರಕ್ರಿಯೆ ಮುಗಿದು ಕ್ರೀಡಾ ಚಟುವಟಿಕೆಗೆ ಮುಕ್ತವಾಗಲಿದೆ.

— ಸದಾನಂದ ಅಮರಾಪುರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net