ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ, ಸೂಕ್ತ ತನಿಖೆ ಮಾಡಿ

ಅರವಿಂದ ಬೆಲ್ಲದ ಸುದ್ದಿಗೋಷ್ಠಿ
ಅರವಿಂದ ಬೆಲ್ಲದ ಸುದ್ದಿಗೋಷ್ಠಿ
Published on
ಧಾರವಾಡ: ಹುಬ್ಬಳ್ಳಿ- ಧಾರವಾಡ ಮಹಾನರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರೇ ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಗಾಂಜಾ ಮುಕ್ತ ಅಭಿಯಾನದ ಹೆಸರಿನಲ್ಲಿ ಪೊಲೀಸರು ಅಮಾಯಕ ವಿದ್ಯಾರ್ಥಿಗೆ ಕಿರುಕುಳ ನೀಡಿದ್ದರಿಂದ ಆದಿತ್ಯ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಕೊಲೆಗೆ ಸಮಾನ. ಕೂಡಲೇ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ತನಿಖೆಗೆ ಅದೇಶಿಸಬೇಕು ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಒತ್ತಾಯಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ 2-3 ಕಾನ್ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ. ಆದರೆ, ಈ ಪ್ರಕರಣಕ್ಕೆ ಮೂಲ ಕಾರಣರಾದ ಅಽಕಾರಿಗಳ ಮೇಲೆ ಕ್ರಮವಾಗಿಲ್ಲ. ಎರಡು ದಿನದಲ್ಲಿ ಸರ್ಕಾರ ಕ್ರಮ ಜರುಗಿಸದಿದ್ದರೆ ಗೋಕಾಕ ಚಳುವಳಿ ಮಾದರಿಯಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಡ್ರಗ್ ಸೇವನೆ ಮಾಡದಿದ್ದರೂ ಅದಿತ್ಯನನ್ನು ಬಂಽಸಿ, ಅವನಿಂದ ಪೊಲೀಸರು ಹಣ ಪಡೆಯುವ ಕೆಲಸ ಮಾಡಿದ್ದಾರೆ. ಮದ್ಯವರ್ತಿ ಮೂಲಕ ಪೊಲೀಸರು ಹಣ ಪಡೆಯುತಿದ್ದಾರೆ. ಕೆಲವರು ಹಣ ಪೋನ್ ಪೇ ಮಾಡಿದ್ದಾರೆ ಎಂದು ದೂರಿದರು.
ಆದಿತ್ಯ, ತಾಯಿಗೆ ಒಬ್ಬನೇ ಮಗ. ತಾಯಿ ಪಾತ್ರೆ ತೊಳೆಯುತ್ತಾಳೆ. ಆದಿತ್ಯಗೆ 2 ಸಾವಿರ ಕೇಳಿದ್ದಾರೆ. ಕೊಡದಿದ್ದರೆ ಬೇರೆ ಪ್ರಕರಣದಲ್ಲಿ ಹಾಕುತ್ತೇವೆ ಎಂದಿದ್ದಕ್ಕೆ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರ ಹೊಣೆಗಾರಿಕೆ ಪೊಲೀಸರದ್ದು. ಹುಬ್ಬಳ್ಳಿ-ಧಾರವಾಡದಲ್ಲಿ 2 ವರ್ಷದಲ್ಲಿ ಕಾನೂನು ವ್ಯವಸ್ಥೆ ಹಡಗೆಡಲು ಕಾರಣ ಯಾರು? ಇಲ್ಲಿ ಕೊಲೆಯಾಗುತ್ತಿವೆ. ಇದಕ್ಕೆ ಕಾರಣ ಪೊಲೀಸ್ ಇಲಾಖೆ ಮುಖ್ಯಸ್ಥರು ಎಂದು ದೂರಿದರು.
ಪೊಲೀಸ್ ಆಯುಕ್ತರ ಕಚೇರಿ ಎಂದರೆ ಗೂಂಡಾಗಳ ಕಚೇರಿ ಆದಂತಾಗಿದೆ. ರೌಡಿ ಶೀಟರ್‌ಗಳು ಪೊಲೀಸ್ ಆಯುಕ್ತರ ಕಚೇರಿಗೆ ಹೋದರೆ ಪೊಲೀಸರು ಕೈ ಕಟ್ಟಿ ಎದ್ದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಸ್ಪೀಟ್, ಜೂಜು ಆಡುವುದಕ್ಕೆ ಪೊಲೀಸರೇ ಪರವಾನಗಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವಿದ್ಯಾಕಾಶಿ ಧಾರವಾಡ ದರೋಡೆಕೊರರ ಬಿಡಾಗಿದೆ. ಪೊಲೀಸ್ ಇಲಾಖೆ ಕುಕೃತ್ಯದಲ್ಲಿ ತೊಡಗಿಸಿಕೊಂಡಿದೆ. ಮಹಾನಗರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದೆ ಎಂದು ದೂರಿದರು.
ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬರುತಿದ್ದಾರೆ. ಡ್ರಗ್ ಪೆಡ್ಲರ್‌ಗಳಿಂದ ಹಣ ಪಡೆದು, ಹಣ ಎತ್ತುವ ಕೆಲಸ ನಡೆದಿದೆ. ಮುಖ್ಯಮಂತ್ರಿ ಅವರಿಗೆ ರಾಜಕೀಯ ಜೀವನ ಕೊಟ್ಟ ಬಾದಾಮಿಯ ಮಹಿಳೆಯ ಮಗ ಪೊಲೀಸರ ಕೃತ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗೃಹ ಸಚಿವರು ಇಂಟೆಲಿಜೆನ್ಸ್ ವರದಿ ತರಿಸಿಕೊಂಡು ತನಿಖೆ ಮಾಡಿಸಬೇಕು. ಕಾನ್ಸ್ಟೇಬಲ್ ಮೇಲೆ ಕ್ರಮ ಆದರೆ ನಡೆಯುವುದಿಲ್ಲ. ಇದರ ಮೇಲೆ ಸಿಬಿಐಗೆ ತನಿಖೆ ಮಾಡಬೇಕು. ಸರ್ಕಾರದಿಂದ ಕ್ರಮ ಆಗದಿದ್ದರೆ ರಸ್ತೆಗಿಳಿಯುತ್ತೇವೆ ಎಂದರು.
ನಿಜವಾದ ಪೆಡ್ಲರ್‌ಗಳನ್ನು ಹಿಡಿಯಲಿ. ನಿಜವಾದ ಮಾರಾಟ ಮಾಡುವ ಮಾರಾಟಗಾರರನ್ನು ಹಿಡಿಯುತ್ತಿಲ್ಲ. ಎಲ್ಲಿಂದ ಗಾಂಜಾ ಬರುತ್ತಿದೆ? ಎಂದು ಪತ್ತೆ ಹಚ್ಚಿ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಮಹಿಳೆಗೆ ಸರ್ಕಾರಿ ನೌಕರಿ ಮತ್ತು 50 ಲಕ್ಷ ರೂ. ಪರಿಹಾರ ಕೊಡಲಿ ಎಂದು ಆಗ್ರಹಿಸಿದರು.
ಸಂಜಯ ಕಪಟಕರ, ರಾಜೇಶ ಕೋಟೆಣ್ಣವರ, ಶಿವಣ್ಣ ಬಡವಣ್ಣವರ, ರಮೇಶ ದೊಡ್ಡವಾಡ, ಪ್ರಮೋದ ಕಾರಕೂನ, ನಾಗರಾಜ ನಾಯಕ, ಮೋಹನ ರಾಮದುರ್ಗ, ಪುಟ್ಟು ನಾಯಿಕ, ಮಂಜುನಾಥ ನೀರಲಕಟ್ಟಿ, ದೇವರಾಜ ಶಹಾಪುರ ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net