Sunflower ಸೂರ್ಯಕಾಂತಿ ಖರೀದಿ ಕೇಂದ್ರಗಳು ಆರಂಭ

ಸೂರ್ಯಕಾಂತಿ Sunflower
ಸೂರ್ಯಕಾಂತಿ Sunflower
Published on
ಧಾರವಾಡ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಗುಣಮಟ್ಟದ ಸೂರ್ಯಕಾಂತಿ Sunflower ಉತ್ಪನ್ನವನ್ನು ಪ್ರತಿ ಕ್ವಿಂಟಾಲ್‌ಗೆ 7,721 ರೂ. ದಂತೆ ಜಿಲ್ಲೆಯ ರೈತರಿಂದ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಟಾಸ್ಕಪೋರ್ಸ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರೈತರ ನೋಂದಣಿಯು 50 ದಿನಗಳವರೆಗೆ (ಮೇ 7ರಿಂದ ಜೂ. 25ರವರೆಗೆ) ಹಾಗೂ ಉತ್ಪನ್ನ ಖರೀದಿಸಲು 60 ದಿನಗಳವರೆಗೆ (ಮೇ 7ರಿಂದ ಜು. 5ರವರೆಗೆ) ನಿಗದಿಪಡಿಸಲಾಗಿದೆ.
ಖರೀದಿ ಕೇಂದ್ರಗಳ ವಿವರ: ಕುಂದಗೋಳ ತಾಲೂಕಿನ ಯರಗುಪ್ಪಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಕುಂದಗೋಳ ಎ.ಪಿ.ಎಂ.ಸಿ.ಯಲ್ಲಿ, ಹಿರೇಹರಕುಣಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಹಿರೇಹರಕುಣಿಯಲ್ಲಿ, ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಶಿರಗುಪ್ಪಿ ಹಾಗೂ ನವಲಗುಂದ ತಾಲೂಕಿನ ಶಿರೂರ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಶಿರೂರ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ನೇರವಾಗಿ ಸೂರ್ಯಕಾಂತಿ ಖರೀದಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಸೂರ್ಯಕಾಂತಿ ಪ್ರತಿ ಎಕರೆಗೆ 4 ಕ್ವಿಂಟಾಲ್‌ನಂತೆ ಹಾಗೂ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್‌ವರೆಗೆ ಖರೀದಿ ಪ್ರಮಾಣ ನಿಗದಿಪಡಿಸಿ, ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 7,721 ರೂ. ನಂತೆ ಸೂರ್ಯಕಾಂತಿ ಖರೀದಿಸಲಾಗುವುದು.
ಪ್ರತಿದಿನ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಮಾತ್ರ ಖರೀದಿಸಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು. ಮಾಹಿತಿಗೆ ಹುಬ್ಬಳ್ಳಿ, ಅಣ್ಣಿಗೇರಿ, ಕುಂದಗೋಳ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಅವರನ್ನು ಹಾಗೂ ಶಾಖಾ ವ್ಯವಸ್ಥಾಪಕರನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net