ಹಣ ವ್ಯಯ ಮಾಡುವ ಯೋಜನೆ ನಿಲ್ಲಿಸಿ

ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ
Published on
ಧಾರವಾಡ: ಕಟ್ಟಡ ಕಾರ್ಮಿಕರ ಆರೋಗ್ಯ, ಪಿಂಚಣಿ, ಮಕ್ಕಳ ಶಿಕ್ಷಣ, ಜೀವನದ ಅಗತ್ಯ ಸೌಲಭ್ಯ ಕಲ್ಪಿಸುವುದಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಅನವಶ್ಯವಾಗಿ ಕಾರ್ಮಿಕ ಕಲ್ಯಾಣ ಮಂಡಳಿಯ ಹಣ ವ್ಯಯ ಮಾಡುವ ಯೋಜನೆ ನಿಲ್ಲಿಸುವಂತೆ ಎಐಯುಟಿಯುಸಿ ಗೆ ಸೇರಿದ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಸಮಿತಿಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ, ಕರ್ನಾಟಕ ರಾಜ್ಯದ ಲಕ್ಷಾಂತರ ಕಟ್ಟಡ ಕಾರ್ಮಿಕರ ದುಡಿಮೆಯಿಂದ ಸಂಗ್ರಹವಾಗಿರುವ ನಿಽಯನ್ನು ಕಲ್ಯಾಣಮಂಡಳಿಯ ಘೋಷಿತ ಹಕ್ಕುಗಳ ಜಾರಿಗಾಗಿ ಬಳಸುವ ಬದಲು, ಭ್ರಷ್ಟಾಚಾರಕ್ಕೆ ಇಂಬು ಕೊಡುವ ಅನ್ಯ ಉದ್ದೇಶಗಳಿಗೆ ಬಳಸುತ್ತಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡಳಿಯು ಹಣದ ಕೊರತೆಯ ನೆಪ ಹೇಳಿ ಎರಡು ವರ್ಷದಿಂದ ಶೈಕ್ಷಣಿಕ ಸಹಾಯಧನ ಕಡಿತಗೊಳಿಸಿದೆ. ಇದರಿಂದಾಗಿ ಕಾರ್ಮಿಕನ ಮಕ್ಕಳು ಶಿಕ್ಷಣವನ್ನೇ ನಿಲ್ಲಿಸುವಂತಾಗಿದೆ. ಹಲವಾರು ಕ್ಲೇಮ್‌ಗಳು ಆದೇಶವಾಗಿದ್ದರೂ ಹಣ ಖಾತೆಗೆ ಸೇರಿಲ್ಲ. ಪಿಂಚಣಿಗೆ ಅನಗತ್ಯ ನಿರ್ಬಂಧ ಹೇರುತ್ತಿದ್ದಾರೆ.
ವಿವಿಧ ಹೆಸರಿನ ಕಿಟ್‌ಗಳ ವಿತರಣೆ ತಕ್ಷಣ ನಿಲ್ಲಿಸಿ ಕಟ್ಟಡ ಕಾರ್ಮಿಕರ ನೈಜ ಬೇಡಿಕೆಗಳ ಹಣವನ್ನು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಬೇಕು. ಬಾಕಿ ಇರುವ ಶೈಕ್ಷಣಿಕ ಧನಸಹಾಯವನ್ನು ಹಳೆಯ ದರದಲ್ಲಿ ಕೂಡಲೇ ಪಾವತಿಸಬೇಕು. ಶಾಲಾ ಕಿಟ್ ಗಳಿಗೆ ಮೀಸಲಿಟ್ಟಿರುವ 115 ಕೋಟಿ ರೂ. ಹಣವನ್ನು ಮಕ್ಕಳಿಗೆ ಶೈಕ್ಷಣಿಕ ಧನಸಹಾಯವಾಗಿ ವಿತರಿಸಬೇಕು. ಕಟ್ಟಡ ಕಾರ್ಮಿಕರು ಹಾಗೂ ಅವರ ಕುಟುಂಬಸ್ಥರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆ ಮತ್ತು ಆರೋಗ್ಯ ಸೌಲಭ್ಯ ಖಾತರಿಪಡಿಸಬೇಕು ಎಂದು ಒತ್ತಾಯಿಸಿದರು.
60 ವರ್ಷ ತುಂಬಿದ ಪ್ರತಿ ನೋಂದಾಯಿತ ಕಟ್ಟಡ ಕಾರ್ಮಿಕರಿಗೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಮಂಜೂರು ಮಾಡಬೇಕು. ಕಲ್ಯಾಣ ಮಂಡಳಿಯ ನಿಽಯನ್ನು ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ಘೋಷಿಸಿರುವ ಎಲ್ಲ ಕಲ್ಯಾಣ ಯೋಜನೆಗಳು ಮತ್ತು ಸೌಲಭ್ಯಗಳನ್ನು ಪ್ರತಿ ಅರ್ಹ ಕಟ್ಟಡ ಕಾರ್ಮಿಕರಿಗೆ ತಲುಪುವಂತೆ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಕಲ್ಯಾಣ ಮಂಡಳಿಯ ಸಿಇಒ ಅವರಿಗೆ ಮತ್ತು ಕಾರ್ಮಿಕ ನಿರೀಕ್ಷಕರ ಮೂಲಕ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ರವಾನಿಸಿದರು.
ಯೋಗಪ್ಪ ಜ್ಯೋತೆಪ್ಪನವರ, ರುದ್ರಕಾಂತ ವಾಣಿ, ಅಲ್ಲಾಭಕ್ಷ ಕಿತ್ತೂರು, ರಿಯಾಜ ತಡಕೋಡ, ಮುಕ್ತಂ ಶಾಪುರ, ಬಾಬುಸಾಬ್ ಬಿಜಾಪುರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net