ವಿದ್ಯುತ್ ಖಾಸಗೀಕರಣ ಮಾಡುತ್ತಿರುವುದನ್ನು ಕೈಬಿಡಿ

ರೈತ ಮುಖಂಡರಿಂದ ಪ್ರತಿಭಟನೆ
ರೈತ ಮುಖಂಡರಿಂದ ಪ್ರತಿಭಟನೆ
Published on
ಧಾರವಾಡ: ರಾಜ್ಯ ಸರ್ಕಾರವು ಖಾಸಗಿ ಕಂಪನಿಗಳಿಗೆ ವಿದ್ಯುತ್ ಸರಬರಾಜು ವಹಿಸುತ್ತಿರುವುದನ್ನು ಕೈಬಿಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.
ನಗರದ ಕಡಪಾ ಮೈದಾನದಲ್ಲಿ ಜಮಾಯಿಸಿದ ರೈತರು, ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದರು. ಬಳಿಕ ಬಾರಕೋಲು ಬೀಸುತ್ತ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಖಾಸಗೀಕರಣ ಮಾಡಿದರೆ ರೈತರಿಗೆ, ಬಡವರಿಗೆ ಹಾಗೂ ಸಾಮಾನ್ಯ ಜನರಿಗೆ ಬಹಳಷ್ಟು ತೊಂದರೆಯಾಗಲಿದೆ. ಸರ್ಕಾರ ಈ ನಿರ್ಧಾರ ಕೈ ಬಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
2025-26ನೇ ಸಾಲಿನ ಮೆಕ್ಕೆಜೋಳ, ಹೆಸರು, ಕಡ್ಲಿ, ವಟಾಣಿ ಹಾಗೂ ಮಾವು ಬೆಳೆಗೆ ಬೆಳೆವಿಮೆ ಪರಿಹಾರ ಹಣ ನೀಡಬೇಕು. 2026-27ನೇ ಸಾಲಿನಲ್ಲಿ ಮುಂಗಾರು ಮಳೆ ಕಡಿಮೆಯಾಗಿದೆ. ಬೆಳೆಗಳು ಸರಿಯಾಗಿಲ್ಲ ಬೆಳೆದಿಲ್ಲ. ಈ ವರ್ಷ ಬರಗಾಲ ಎಂದು ಘೋಷಿಸಬೇಕು. ಬ್ಯಾಂಕ್ ಅಧಿಕಾರಿಗಳು ರೈತರಿಗೆ ಸಾಲ ವಸೂಲಿಗೆ ನೋಟಿಸ್ ನೀಡಿ ತೊಂದರೆ ನೀಡುತ್ತಿದ್ದಾರೆ. ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ಮಾಡಿ, ತೊಂದರೆ ನೀಡದಂತೆ ತಿಳಿ ಹೇಳಬೇಕು. ಮೈಕ್ರೋ ಫೈನಾನ್ಸ್ಗಳು ಸಾಲ ವಸೂಲಿ ನೆಪದಲ್ಲಿ ಮನೆಗಳಿಗೆ ಕೀಲಿ ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಲಾಯಿತು.
ಫಾರೂಕ ಕಿಲ್ಲೇದಾರ, ಮಾರುತಿ ಸುಂಕದ, ಅಲ್ಲಭಕ್ಷ ಕುನ್ನನ್ನವರ, ಬಸಪ್ಪ ಶೀಗಿಹಳ್ಳಿ, ಮಲ್ಲಪ್ಪ ಶಿರಣ್ಣವರ, ಅಶೋಕ ಬಡಿಗೇರ, ಈರಪ್ಪ ಸಿಂಧಗಿ, ಉಮೇಶ ಉಪ್ಪಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net