ವಿದ್ಯುತ್ ಖಾಸಗೀಕರಣ ಕೈ ಬಿಡಿ

ಎಐಕೆಕೆಎಂಎಸ್ ನಿಂದ ಪ್ರತಿಭಟನೆ
ಎಐಕೆಕೆಎಂಎಸ್ ನಿಂದ ಪ್ರತಿಭಟನೆ
Published on
ಧಾರವಾಡ: ಸರ್ಕಾರವು ವಿದ್ಯುತ್ ಸರಬರಾಜು ಖಾಸಗೀಕರಣ ಮಾಡುತ್ತಿರುವುದು ಜನವಿರೋಧಿ ನಡೆಯಾಗಿದೆ. ಖಾಸಗಿ ಕಂಪನಿಗೆ ವಿದ್ಯುತ್ ಸರಬರಾಜಿನ ಪರವಾನಗಿ ನೀಡಿರುವುದನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಪದಾಽಕಾರಿಗಳು ಶುಕ್ರವಾರ ಜಿಲ್ಲಾಽಕಾರಿ ಕಚೇರಿ ಎದುರು ಪ್ರತಿಭಟಿಸಿದರು.
ನಾಗರಿಕ ಸಮಾಜದ ಬೆಳವಣಿಗೆಯಲ್ಲಿ ವಿದ್ಯುತ್ ಅತ್ಯಂತ ಪ್ರಮುಖವಾಗಿದೆ. ಪ್ರಸ್ತುತ ವಿದ್ಯುತ್ ಮೂಲಭೂತ ಅವಶ್ಯಕತೆಯಾಗಿದೆ. ದೇಶದ ಮೂಲೆ ಮೂಲೆಗೆ ವಿದ್ಯುತ್ ನೀಡುವ ಜವಾಬ್ದಾರಿ ಸರ್ಕಾರದ್ದು. ಆದರೆ, ದುರಂತವೆಂದರೆ ಸರ್ಕಾರವು ವಿದ್ಯುತ್ ಸರಬರಾಜು ಖಾಸಗೀಕರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದಿನ ಹವಾಮಾನ ವೈಪರಿತ್ಯದಿಂದ ಕೃಷಿ ಕ್ಷೇತ್ರ ಸಂಪೂರ್ಣ ನೆಲಕಚ್ಚಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ರೈತ, ಕೃಷಿ ಕಾರ್ಮಿಕರ ನೆರವಿಗೆ ಧಾವಿಸಿ, ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿ ಕೃಷಿ ಕ್ಷೇತ್ರ ಉಳಿಸಬೇಕಾಗಿದೆ. ಖಾಸಗಿ ಕಂಪನಿಗಳಿಗೆ ವಿದ್ಯುತ್ ಸರಬರಾಜನ್ನು ವಹಿಸಿಕೊಟ್ಟರೆ ರೈತರ ಪಂಪ್‌ಸೆಟ್‌ಗಳಿಗೆ ಸ್ಮಾರ್ಟ್ ಮೀಟರ್ ಅಳವಡಿಸಿ, ರೈತರನ್ನು ಮಣ್ಣು ಪಾಲು ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡಬಾರದು ಮತ್ತು ವಿದ್ಯುತ್ ಸರಬರಾಜಿಗೆ ಖಾಸಗಿ ಕಂಪನಿಗೆ ಪರವಾನಾಗಿ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ದೀಪ ಧಾರವಾಡ, ಶರಣು ಗೋನವಾರ, ರಾಣಪ್ಪ ಸಾವಂತನವರ, ಬಸಮ್ಮ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net